ಬಳ್ಳಾರಿ: ಹೋಂ ಐಸೋಲೇಷನ್ ನಲ್ಲಿದ್ದ ಕೊರೊನಾ ಸೋಂಕಿತ ವೃದ್ಧರೊಬ್ಬರು ಅನ್ನ ನೀರು ಸಿಗದೆ ಹಸಿವಿನಿಂದ ನರಳಿ ನರಳಿ ಕೊನೆಯುಸಿರೆಳೆದಿರುವ ಧಾರುಣ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯ ಟಿ. ಬೆಳಗಲ್ಲು ಗ್ರಾಮದಲ್ಲಿ ಇಂಥ ದುರ್ಘಟನೆ ನಡೆದಿದ್ದು, ಮನೆಯಲ್ಲೇ ಪ್ರತ್ಯೇಕವಾಗಿದ್ದ ಕೊರೊನಾ ಸೋಂಕಿತ ವೃದ್ಧರು ಊಟ ಸಿಗದೇ ಮೃತಪಟ್ಟಿದ್ದಾರೆ. ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಈ ಬಗ್ಗೆ ತನಿಖೆಗೆ ಬಳ್ಳಾರಿ ಜಿಲ್ಲಾಡಳಿತ ಆದೇಶ ನೀಡಿದೆ.
ಮೂಲಗಳ ಪ್ರಕಾರ ವೃದ್ಧರಿಗೆ ಸೋಂಕು ತಗುಲಿರುವ ವಿಚಾರ ತಿಳಿಯುತ್ತಲೇ ಆತನ ಕುಟುಂಬಸ್ಥರು ಆ ವೃದ್ಧರೊಬ್ಬರನ್ನೇ ಮನೆಯಲ್ಲಿ ಬಿಟ್ಟು ಪ್ರತ್ಯೇಕವಾಗಿ ಹೊರಟುಹೋಗಿದ್ದರು. ಮನೆಯಲ್ಲೇ ಇದ್ದ ವೃದ್ಧರು ಕೋವಿಡ್ ಸಹಾಯವಾಣಿಗೆ ನಿರಂತರವಾಗಿ ಕರೆ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ. ಅನ್ನ ನೀರು, ಸೂಕ್ತ ಚಿಕಿತ್ಸೆ ಸಿಗದೇ ಅವರು ಮನೆಯಲ್ಲೇ ನರಳಿ ಪ್ರಾಣ ಬಿಟ್ಟಿದ್ದಾರೆ.
ಸೋಂಕಿತ ವೃದ್ಧರು ಊಟಕ್ಕಾಗಿ ಕಿರುಚಾಡುತ್ತಿದ್ದರು, ಕಳೆದ 2 ದಿನಗಳಿಂದ ದಾರಿಹೋಕರನ್ನು ಕೂಗಿ ಅನ್ನ ನೀಡುವಂತೆ ಗೋಗರೆಯುತ್ತಿದ್ದರು. ಒಮ್ಮೆ ಮಾತ್ರ ಆತನಿಗೆ ಸ್ಥಳೀಯರು ಊಟ ನೀಡಿದ್ದರು. ಆದರೆ ಬಳಿಕ ಸೋಂಕಿತ ವ್ಯಕ್ತಿ ಹಸಿವಿನಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಸ್ಥಳೀಯ ಜಿಲ್ಲಾಡಳಿತಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದು, ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತ ವೃದ್ಧರು ಆಗಸ್ಟ್ 15ರಂದು ಸೋಂಕಿಗೆ ತುತ್ತಾಗಿದ್ದರು. ಆದರೆ ಆಸ್ಪತ್ರೆಗೆ ತೆರಳದೆ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುವುದಾಗಿ ಹೇಳಿದ್ದರು. ಆದರೆ ಅವರ ಕುಟುಂಬಸ್ಥರು ತಮಗೂ ಸೋಂಕು ತಗುಲುತ್ತದೆ ಎಂಬ ಭೀತಿಯಿಂದ ದೂರದ ಪ್ರದೇಶಕ್ಕೆ ತೆರಳಿದ್ದರು.
ಇದಕ್ಕೂ ಮೊದಲು ಸೋಂಕಿತ ವೃದ್ಧರು ಕೊಟ್ಟೂರ ಗ್ರಾಮದಲ್ಲಿನ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿ ಮನೆಗೆ ವಾಪಸ್ ಆಗಿದ್ದರು. ಮನೆಯಿಂದ ಸಾಕಷ್ಟು ಬಾರಿ ವೃದ್ಧ ಕಿರುಚಾಡುತ್ತಿದ್ದರು. ಊಟ ನೀಡುವಂತೆ ಕೇಳುತ್ತಿದ್ದರು. ಸೋಮವಾರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಮಂಗಳವಾರ ಬೆಳಗ್ಗೆ ಅವರು ಸೂಕ್ತ ಚಿಕಿತ್ಸೆ ಮತ್ತು ಆಹಾರ ಸಿಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದ್ದು, ಆಶಾ ಕಾರ್ಯಕರ್ತೆಯನ್ನೂ ತನಿಖೆಗೊಳಪಡಿಸುವಂತೆ ಸೂಚಿಸಿದೆ.
ಅದೇನೆ ಇರಲಿ ಹೋಂ ಐಸೋಲೇಷನ್‌ನಲ್ಲಿ ಇದ್ದ ಒಬ್ಬ ವೃದ್ಧರನ್ನು ನೋಡಿಕೊಳ್ಳಲಾಗದ ಜಿಲ್ಲಾಡಳಿತ ಈಗ ಹೋದ ಜೀವವನ್ನು ಮರಳಿ ಕೊಡಲು ಸಾಧ್ಯವೆ. ಈ ಬಗ್ಗೆ ಮೊದಲೇ ಮುಂಜಾಗ್ರತೆ ವಹಿಸಿದ್ದರೆ ಒಂದು ಹಿರಿಯ ಜೀವ ಉಳಿಯುತ್ತಿತ್ತು. ಇನ್ನಾದರೂ ಉಳಿದಿರುವ ಜೀವಗಳನ್ನು ರಕ್ಷಿಸಿಕೊಳ್ಳುವತ್ತ ಜಿಲ್ಲಾಡಳಿತ ಮತ್ತು ಸರ್ಕಾರ ನಿಗವಹಿಸಬೇಕಿದೆ.