ಬೆಂಗಳೂರು: ಈ ಬಾರಿ ರೈತರು ಶೇ.20ರಷ್ಟು ಹೆಚ್ಚಾಗಿ ಫಸಲೊಡ್ಡಿದ್ದಾರೆ. ಅವರಿಗೆ ಸರ್ಕಾರ ಸಮರ್ಪಕವಾಗಿ ರಸಗೊಬ್ಬರ ಪೂರೈಸಲು ಮುಂದಾಗಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು ರೈತರು ಕಂಗಾಲಾಗಿದ್ದಾರೆ. ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಗೊಬ್ಬರ ಸಿಗದ ರೈತರು ಹಿಡಿಶಾಪ ಹಾಕುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.
ಇನ್ನು ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವಲ್ಲಿ ಏದುಸಿರು ಬಿಡುತ್ತಿರುವ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ರಸಗೊಬ್ಬರ, ವಿಶೇಷವಾಗಿ ಯೂರಿಯಾ, ಸಮರ್ಪಕವಾಗಿ ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಾಡಿಕೆಗಿಂತ ಈ ಬಾರಿ ರಾಜ್ಯದಾದ್ಯಂತ ಶೇ. 25ರಷ್ಟು ಹೆಚ್ಚು ಬಿತ್ತನೆ ಆಗಿದೆ. ಕೃಷಿ ಇಲಾಖೆ ಇದನ್ನು ಅಂದಾಜಿಸುವಲ್ಲಿ ಎಡವಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಬಾಯಿಮಾತಿನ ಅನುಕಂಪಕ್ಕಿಂತ ರಸಗೊಬ್ಬರ ಪೂರೈಕೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಗೊಬ್ಬರ ಕೊರತೆಯಿಂದ ಬಿತ್ತನೆ ಕಾರ್ಯ ನಿಲ್ಲಿಸದಂತೆ ತುರ್ತು ಸೂಕ್ತ ವ್ಯವಸ್ಥೆ ಮಾಡುವಂತೆಯೂ ಒತ್ತಾಯಿಸಿದ್ದಾರೆ.