ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಲ್ಲಿಸಿರುವ ಬೇಡಿಕೆಗಳ ಪ್ರಣಾಳಿಕೆಯ ಬಗ್ಗೆ ಚರ್ಚಿಸುವ ಸಲುವಾಗಿ ಇದೇ ಅಕ್ಟೋಬರ್ 17 ರಂದು ಸೋಮವಾರ ಸಂಜೆ 5 ಗಂಟೆಗೆ ವಿಧಾನ ಸೌಧ, 3ನೇ ಮಹಡಿ ಸಾರಿಗೆ ಸಚಿವರ ಕೊಠಡಿ (ಸಂಖ್ಯೆ: 328)ಯಲ್ಲಿ ಸಭೆ ಕರೆಯಲಾಗಿದೆ.
ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಈ ಸಭೆ ಕರೆಯಲಾಗಿದ್ದು, ಸಭೆಗೆ ಸಾರಿಗೆ ಇಲಾಖೆಗೆ ಸಂಬಂಧಿಸಿದ 4 ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಅಧಿಕಾರಿಗಳು ಹಾಜರಾಗುವಂತೆ ಸಚಿವ ಶ್ರೀರಾಮುಲು ನಿರ್ದೇಶನ ನೀಡಿದ್ದಾರೆ ಎಂದು ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
6 ಸಂಘಟನೆಗಳ ಪದಾಧಿಕಾರಿಗಳು ಮಾತ್ರ ಜಂಟಿ ಕ್ರಿಯಾಸಮಿತಿ ರಚನೆ ಮಾಡಿಕೊಂಡಿದ್ದಾರೆ. ಇನ್ನು ಈ ಕ್ರಿಯಾಸಮಿತಿ ಪ್ರಮುಖವಾಗಿ ಸರಿ ಸಮಾನ ವೇತನ ಕೊಡಬೇಕು. ಆದರೆ, ವೇತನ ಆಯೋಗ ಬೇಡ ಎಂಬ ನಿಲುವನ್ನು ಹೊಂದಿದೆ. ಹೀಗಾಗಿಯೇ ಸಮಿತಿ ಸಲ್ಲಿಸಿರುವ ಬೇಡಿಕೆಗಳ ಪ್ರಣಾಳಿಕೆಯ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ.
ಈ ಹಿಂದೆ ಬಳ್ಳಾರಿಯಲ್ಲಿ ನೌಕರರ ಕೂಟ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಇನ್ನು 4-5ದಿನದಲ್ಲಿ ಸಭೆ ಕರೆದು ಮಾತನಾಡುತ್ತೇವೆ ಎಂದು ಹೇಳಿ ಉಪವಾಸ ಸತ್ಯಾಗ್ರಹ ವಾಪಸ್ ತೆಗೆದುಕೊಳ್ಳುವಂತೆ ಮನವಿ ಮಾಡಿ ಭರವಸೆ ಕೊಟ್ಟಿದ್ದರು. ಆದರೆ, ನಂತರದ ದಿನಗಳಲ್ಲಿ ಸಭೆಯನ್ನೇ ಕರೆದಿಲ್ಲ.
ಜಂಟಿ ಕ್ರಿಯಾ ಸಮಿತಿಯ ಬೇಡಿಕೆಗಳು: ವಾಯವ್ಯ ಮತ್ತು ಈಶಾನ್ಯ ನಿಗಮಗಳಲ್ಲಿ ಗುತ್ತಿಗೆ ಪದ್ಧತಿಯ ಮೂಲಕ ಸಿಬ್ಬಂದಿಗಳನ್ನು ನೇಮಿಸುವುದನ್ನು ನಿಲ್ಲಿಸಬೇಕು. ಅದೇ ರೀತಿಯಲ್ಲಿನಿಗಮಗಳಿಗೆ ಸೇರಿರುವ 41 ಮಾರ್ಗಗಳನ್ನು ಖಾಸಗಿಯವರಿಗೆ ಕೊಡುವುದನ್ನು ರದ್ದು ಮಾಡಬೇಕು.
ಇಂದು ಬೆಲೆ ಏರಿಕೆ ಮತ್ತಿತರ ಕಾರಣಗಳಿಂದ ಸಾರಿಗೆ ನಿಗಮಗಳ ನೌಕರರು ಜೀವನ ನಡೆಸುವುದೇ ಕಷ್ಟವಾಗಿದೆ. ನಾವು ನಮ್ಮ ಜಂಟಿ ಕ್ರಿಯಾ ಸಮಿತಿ ವತಿಯಿಂದ 10 ಅಂಶಗಳ ಬೇಡಿಕೆಗಳ ಪ್ರಣಾಳಿಕೆಯನ್ನು 08.08.2022 ರಂದು ಸಾರಿಗೆ ನಿಗಮಗಳ ಆಡಳಿತ ವರ್ಗಕ್ಕೆ ಕೊಟ್ಟಿದ್ದು, ವೇತನ, ಬಾಟ ಇತ್ಯಾದಿಗಳ ಹೆಚ್ಚಳ, ಉತ್ತಮ ವೈದ್ಯಕೀಯ ಸೌಲಭ್ಯ, ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿಗದಿ ಪಡಿಸುವುದು (ಫಾರಂ-4).
ಮಹಿಳಾ ನೌಕರರಿಗೆ ಸಂಬಂಧಪಟ್ಟ ಕೆಲವು ಬೇಡಿಕೆಗಳು, ಉತ್ತಮವಾದ ಪೆನ್ಶನ್, ಕೈಗಾರಿಕಾ ಒಪ್ಪಂದಗಳಂತೆ ಗ್ರಾಚ್ಯುಟಿ ಕೊಡುವುದು ಹಾಗೂ ಮುಷ್ಕರದ ಸಂದರ್ಭದಲ್ಲಿ ವಜಾ ಆಗಿರುವ ಎಲ್ಲ ನೌಕರರನ್ನು ಬೇಷರತ್ತಾಗಿ ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳುವುದು ಮುಂತಾದ ಬೇಡಿಕೆಗಳು.
1947ರ ಪ್ರಕಾರ ದ್ವಿಪಕ್ಷೀಯ ಒಪ್ಪಂದ: ನಾಲ್ಕು ಸಾರಿಗೆ ನಿಗಮಗಳಲ್ಲಿ (ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ವಾಯವ ಮತ್ತು ಕಲ್ಯಾಣ ಕರ್ನಾಟಕ) ಸುಮಾರು ಒಂದು ಲಕ್ಷ ಏಳು ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ನಿಗಮಗಳಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡುವ ಪರಂಪರೆ ಇದೆ. 1996ಕ್ಕೆ ಮುಂಚೆ ಕಾರ್ಮಿಕ ಸಂಘಟನೆಗಳು ವೇತನ ಹೆಚ್ಚಳ ಇತ್ಯಾದಿ ಸೌಲಭ್ಯಗಳ ಬಗ್ಗೆ ಆಡಳಿತ ವರ್ಗಕ್ಕೆ ಕೊಡುತ್ತಿದ್ದ ಬೇಡಿಕೆಗಳ ಬಗ್ಗೆ ಚರ್ಚೆಗಳಾಗಿ ಕೈಗಾರಿಕಾ ವಿವಾದ ಕಾಯಿದೆ 1947ರ ಪ್ರಕಾರ ದ್ವಿಪಕ್ಷೀಯ ಒಪ್ಪಂದಗಳಾಗುತ್ತಿದ್ದವು.
1996ರ ನಂತರ ಆಡಳಿತ ವರ್ಗ ಏಕ ಪಕ್ಷೀಯವಾಗಿ ವೇತನ ಹೆಚ್ಚಳ ಮಾಡುತ್ತಿತ್ತು. 2012 ಮತ್ತು 2016 ರಲ್ಲಿ ಸಾರಿಗೆ ನೌಕರರ ರಾಜ್ಯವ್ಯಾಪಿ ಮುಷ್ಕರಗಳ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ವೇತನ ಪರಿಷ್ಕರಣೆ ಆಯಿತು.
2019ರ ಕೊನೆಭಾಗದಲ್ಲಿ ಎಲ್ಲ ಕಾರ್ಮಿಕ ಸಂಘಟನೆಗಳೂ ಬೇರೆ ಬೇರೆ ಬೇಡಿಕೆಗಳನ್ನು ಸಾರಿಗೆ ನಿಗಮಗಳ ಆಡಳಿತವರ್ಗಕ್ಕೆ ಕೊಟ್ಟಿದ್ದವು. 01.01.2020 ರಿಂದ ವೇತನ ಹೆಚ್ಚಳ ಆಗಬೇಕಾಗಿದೆ. ಬಹುಶಃ ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ಉಭಯತ್ರರಿಗೂ ಒಪ್ಪಿಗೆ ಆಗುವ ವೇತನ ಒಪ್ಪಂದ ಆಗಿದ್ದರೆ, ಇಂದು ಪರಿಸ್ಥಿತಿ ಬೇರೆ ಇರುತ್ತಿತ್ತು. ಆದರೆ ಅಂದಿನ ಅಧಿಕಾರ ವರ್ಗಕ್ಕೆ ದೂರದೃಷ್ಟಿ ಇರಲ್ಲಿಲ್ಲ ಹಾಗೂ ಇನ್ನೂ ಇತರ ಕಾರಣಗಳಿಂದ ಕೈಗಾರಿಕಾ ಒಪ್ಪಂದ ಆಗಿಲ್ಲ.