ಬೆಂಗಳೂರು: ಏಳು ವರ್ಷದ ಗಂಡು ಮಗುವೊಂದು ವೈದ್ಯರ ನಿರ್ಲಕ್ಷ್ಯಕ್ಕೆ ಮೃತಪಟ್ಟಿರುವ ಅಮಾನವೀಯ ಘಟನೆ ನಗರದ ಸಂಪಂಗಿ ರಾಮನಗರದಲ್ಲಿ ನಡೆದಿದೆ.
ಆಡನ್ ಮೈಕಲ್ ಎಂಬ 7 ವರ್ಷ ಮಗುವಿಗೆ ಗಂಟಲು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಕೊಟ್ಟಿದ್ದ ಅನಸ್ತೇಷಿಯಾದಿಂದ (Anesthesia) ಆ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಸಂಪಂಗಿ ರಾಮನಗರದ ಸಿಂಧ್ಯಾ ಆಸ್ಪತ್ರೆಯ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಮಗು ಅಸುನೀಗಿದ ವಿಷಯ ತಿಳಿಯುತ್ತಿದ್ದಂತೆ ವೈದ್ಯರು ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದು, ಇತ್ತ ಮಗನನ್ನು ಕಳೆದುಕೊಂಡ ಪಾಲಕರು ಕಣ್ಣೀರಾಕುತ್ತಿದ್ದಾರೆ. ಆಡನ್ ಮೈಕಲ್‌ಗೆ ಊಟ ಮಾಡುವಾಗ ಗಂಟಲು ನೋವು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ನಾವು ಮಗನನ್ನು ಸಿಂಧ್ಯಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆವು. ಆ ವೇಳೆ ವೈದ್ಯರು ಮಗುವಿಗೆ ಆಪರೇಷನ್ ಮಾಡಬೇಕು ಎಂದಿದ್ದರು. ಅದಕ್ಕೆ ನಾವು ಒಪ್ಪಿಕೊಂಡಿದ್ದೆವು.
ಆದರೆ ಆಪರೇಷನ್ ವೇಳೆ ಡಾ.ಶ್ವೇತಾ ಪೈ ಎಂಬುವವರು ಆಡನ್ ಮೈಕಲ್‌ಗೆ ಅನೆಸ್ತೇಷಿಯಾ ಕೊಟ್ಟಿದ್ದು, ಬಳಿಕ ಮೃತಪಟ್ಟಿದ್ದಾನೆ. ಆದರೆ ಈ ವಿಷಯವನ್ನು ವೈದ್ಯರು ನಮಗೆ ತಿಳಿಸಿಲ್ಲ. ಬದಲಿಗೆ ಮಗುವಿಗೆ ಹೃದಯ ಸಮಸ್ಯೆಯಿದೆ ಎಂದು ನಾಟಕವಾಡಿದರು. ಈ ವಿಚಾರದಿಂದ ನಮಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದೆವು. ಪರಿಶೀಲನೆ ವೇಳೆ ಮಗು ಮೃತಪಟ್ಟಿರುವುದು ಗೊತ್ತಾಯಿತು ಎಂದು ಗೋಳಾಡುತ್ತಿದ್ದಾರೆ.
ಇನ್ನು ಅನಸ್ತೇಷಿಯಾ ನೀಡಿದ ಬಳಿಕ 3 ಇಂಜೆಕ್ಷನ್ ಕೊಟ್ಟಿದ್ದು ಓವರ್ ಡೋಸ್ ಆಗಿ ನಮ್ಮ ಮಗ ಮೃತಪಟ್ಟಿದ್ದಾನೆ ಎಂದು ಪಾಲಕರು ಆರೋಪ ಮಾಡಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಮಗು ಸತ್ತಿದೆ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ನಮಗಾದ ನೋವು ಯಾರಿಗೂ ಆಗಬಾರದು, ನ್ಯಾಯ ಕೊಡಿಸಿ ಎಂದು ಗೋಳಾಡುತ್ತಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮಗು ಕಳೆದುಕೊಂಡ ತಾಯಿ, ತಂದೆ ಕಣ್ಣೀರಾಕ್ತಿದ್ದಾರೆ.