ಬೆಂಗಳೂರು: ರಾಜಾಜಿನಗರದ ಮಾರಪ್ಪನ ಪಾಳ್ಯ ನಿವಾಸಿ ಕುಮಾರ್ ಎಂಬುವವರು ರಸ್ತೆಗುಂಡಿಗೆ ಬಲಿಯಾಗಿದ್ದಕ್ಕೆ ಶಾಸಕ ಡಾ. ಸಿ.ಎನ್.ಅಶ್ವಥ್ ನಾರಾಯಣ್ ವಿರುದ್ಧ ಸ್ಥಳೀಯರು ದೂರು ನೀಡಿದರೂ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿಲ್ಲ. ಬದಲಾಗಿ, ರಸ್ತೆಗುಂಡಿ ವಿರುದ್ಧ ಪ್ರತಿಭಟಿಸಿದವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವುದು ಹೇಯಕೃತ್ಯ ಎಂದು ಆಮ್ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ್ ದಾಸರಿ, ಸ್ಥಳೀಯ ಶಾಸಕ ಹಾಗೂ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ್ ವಿರುದ್ಧ ಸುಮಾರು ಐವತ್ತು ಸ್ಥಳೀಯರ ಸಹಿಯುಳ್ಳ ದೂರನ್ನು ಪೊಲೀಸರಿಗೆ ನೀಡಲಾಗಿದೆ. ಆದರೆ ಪೊಲೀಸರು ದೂರನ್ನು ಸ್ವೀಕರಿಸಲು ಹಾಗೂ ಪ್ರಕರಣ ದಾಖಲಿಸಿಕೊಳ್ಳಲು ಹಿಂಜರಿದಿದ್ದಾರೆ. ಆದರೆ ಪ್ರತಿಭಟನೆ ನಡೆಸಿದ ಕಾರಣಕ್ಕೆ ಆಮ್ ಆದ್ಮಿ ಪಾರ್ಟಿ ನಾಯಕರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ನ್ಯಾಯದ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಬದಲು ಸಚಿವರ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ. ಪೊಲೀಸರನ್ನು ಕೈಗೊಂಬೆ ಮಾಡಿಕೊಂಡು ಜನರ ದನಿಯನ್ನು ಹತ್ತಿಕ್ಕುತ್ತಿರುವ ಅಶ್ವಥ್ ನಾರಾಯಣ್ ಅವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ಜನಸಾಮಾನ್ಯರು ಸಾಯುತ್ತಿರುವುದನ್ನು ಸರ್ಕಾರಿ ಪ್ರಾಯೋಜಿತ ಕಗ್ಗೊಲೆ ಎಂದು ಪರಿಗಣಿಸಬೇಕು. ರಸ್ತೆಗುಂಡಿಗೆ ಕಾರಣರಾದ ಶಾಸಕರು ಹಾಗೂ ಅಧಿಕಾರಿಗಳನ್ನು ಕೊಲೆಗಾರರೆಂದು ಕರೆಯಬೇಕು. ಈ 40% ಸರ್ಕಾರಕ್ಕೆ ರಸ್ತೆಗುಂಡಿಗಳನ್ನು ಕಾಲಕಾಲಕ್ಕೆ ಮುಚ್ಚಿಸಬೇಕು ಹಾಗೂ ಪಾರದರ್ಶಕವಾಗಿ ರಸ್ತೆ ಕಾಮಗಾರಿಗಳನ್ನು ನಡೆಸಬೇಕು ಎಂಬ ಕಾಳಜಿ ಇಲ್ಲ. ಕೇವಲ ದುಡ್ಡು ಹೊಡೆಯುವುದೊಂದೇ ಸಚಿವರು ಹಾಗೂ ಶಾಸಕರ ಗುರಿಯಾಗಿದೆ.
ಬಿಬಿಎಂಪಿ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವುದಕ್ಕೆ ಬೆರಳೆಣಿಕೆಯ ದಿನಗಳಿದ್ದಾಗ ಮಾತ್ರ ರಸ್ತೆಗುಂಡಿಗಳನ್ನು ಕಳಪೆ ಕಾಮಗಾರಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿ ಮತದಾರರನ್ನು ವಂಚಿಸಲು ಸರ್ಕಾರ ನಿರ್ಧರಿಸಿದೆ. ಇಂತಹ ಭ್ರಷ್ಟ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಮೋಹನ್ ದಾಸರಿ ಹೇಳಿದರು.