ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಸೇರಿ ಇತರ ಮೂವರು ಸಾರಿಗೆ ನೌಕರರ ವಿರುದ್ಧ ಕೂಟದ ರಾಜ್ಯ ಮಹಿಳಾಧ್ಯಕ್ಷರು ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಸಾರಿಗೆ ನೌಕರರಾದ ಎಂ.ಬಿ.ಮೂರ್ನಾಳ, ಎಚ್.ಎಂ.ಚಿತ್ತಾಪುರ ಹಾಗೂ ಸಂಗಮೇಶ್ ಎಂಬುವರ ವಿರುದ್ಧ ದೂರು ನೀಡಿದ್ದು ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುದಿನ ಕ್ರಮ ಜರುಗಿಸುತ್ತಿದ್ದಾರೆ.
ದೂರಿನಲ್ಲಿ ಏನಿದೆ?: ಸಾರಿಗೆ ನೌಕರರ ಕೂಟದ ಮಹಿಳಾಧ್ಯಕ್ಷೆಯಾದ ಚಂಪಕಾವತಿಯಾದ ನಾನು ಬೆಂಗಳೂರಿನಲ್ಲಿ ವಾಸವಾಗಿದ್ದು ಕೊಂಡು ಕೆಎಸ್‌ಆರ್‌ಟಿಸಿ ಕೇಂದ್ರಿಯ ಡಿಪೋ-4ರಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡಿಕೊಂಡಿದ್ದು, ನೌಕರರ ಕೂಟದ ಮಹಿಳಾ ಅಧ್ಯಕ್ಷೆಯಾಗಿದ್ದೇನೆ.
ನಮ್ಮ ಕೂಟದ ಕಚೇರಿಯು ನಂ.54, 6ನೇ ಕ್ರಾಸ್, ವಿಲ್ಸನ್ ಗಾರ್ಡನ್. ಬೆಂಗಳೂರು ನಗರ ಇಲ್ಲಿದೆ. ಚಂದ್ರಶೇಖರ್ ಸಂಘದ ರಾಜ್ಯಾಧ್ಯಕ್ಷರಾಗಿದ್ದು, 26/12/2023 ರಂದು ಚಂದ್ರಶೇಖರ್ ಅವರು ನನ್ನ ಮತ್ತು ಕೋರ್ ಕಮಿಟಿ ಬಹುತೇಕ ಸದಸ್ಯರ ಗಮನಕ್ಕೆ ಬಾರದಂತೆ ಮೈಸೂರಿನಲ್ಲಿ ಸಾರಿಗೆ ಸಂಭ್ರಮ ಎಂಬ ಕಾರ್ಯಕ್ರಮಕ್ಕೆ 50 ಲಕ್ಷ ರೂ.ಗಳು ಬೇಕಾಗಿರುವುದರಿಂದ ಪ್ರತಿ ಘಟಕದಿಂದ 20 ಸಾವಿರ ರೂ.ಗಳನ್ನು ಸಂಗ್ರಹ ಮಾಡುವಂತೆ ಸೂಚಿಸಿದ್ದರು.
ಈ ವಿಚಾರ ನನ್ನ ಗಮನಕ್ಕೆ ಬಂದು ನಾನು ಚಂದ್ರಶೇಖರ್ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ ಅವರು ನನ್ನ ಮೇಲೆ ಕೋಪಗೊಂಡು ಈ ಹಿಂದೆ ನಾನು ನಮ್ಮ ನೌಕರರೊಬ್ಬರ ಮಗಳ ಮದುವೆಗೆ ಸಂಘದ ಕಡೆಯಿಂದ 4 ಲಕ್ಷ ರೂ.ಗಳನ್ನು ಸಾಲದ ರೂಪದಲ್ಲಿ ನೀಡುವಂತೆ ಕೇಳಿದ್ದ ಆಡಿಯೋ ಅನ್ನು ದುರ್ಬಳಕೆ ಮಾಡಿಕೊಂಡು ಜನವರಿ 3-2024 ರಂದು ನನ್ನ ಫೋಟೋ ಮತ್ತು ಆ ಆಡಿಯೋ ಅನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾರೆ.
ಈ ಮೂಲಕ ಚಂದ್ರಶೇಖರ್, ಎಂ.ಬಿ.ಮೂರ್ನಾಳ ಹಾಗೂ ಎಚ್.ಎಂ.ಚಿತ್ತಾಪುರ ಹಾಗೂ ಸಂಗಮೇಶ್ ಅವರು ನನ್ನ ಹಾಗೂ ನಮ್ಮ ಸಹ ನೌಕರರ ಬಗ್ಗೆ ಅವಾಚ್ಯ ಶಬ್ದಗಳುಳ್ಳ ಸಂದೇಶಗಳನ್ನು ಕ್ರಾಂತಿಕಾರಿ ನೇತಾಜಿ ಸುಭಾಷ್‌ಚಂದ್ರ ಭೋಸ್ ಹೆಸರಿನ ವ್ಯಾಟ್ಸಪ್ ಗ್ರೂಪ್‌ನಲ್ಲಿ ಹಾಕಿ ಹೆಂಗಸಾದ ನನನ್ನು ಅವಹೇಳನ ಮಾಡಿ, ಆ ನಂತರ ಇದೇ ಸಂದೇಶಗಳನ್ನು ಸಾರಿಗೆ ನೌಕರರ ವಿವಿಧ ವ್ಯಾಟ್ಸಪ್ ಗ್ರೂಪಿಗಳಲ್ಲಿ ಹಾಕಿ ನನಗೆ ಅವಮಾನಿಸಿದ್ದಾರೆ.
ಜನವರಿ 5-2024 ರಂದು ರಾತ್ರಿ 09.00 ಗಂಟೆಯಿಂದ ರಾತ್ರಿ 09.30 ಗಂಟೆಯ ಸಮಯದಲ್ಲಿ ಮನೆಗೆ ತೆರಳಲೆಂದು ನಮ್ಮ ಸಂಘದ ಕಚೇರಿಯ ಮುಂಭಾಗ ನಾನು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಲ್ಲಿಗೆ ಚಂದ್ರಶೇಖರ್ ಅವರು ಬಂದು ನನ್ನನ್ನು ಅಡ್ಡಗಟ್ಟಿ, ನನ್ನ ವಿಡಿಯೋ ಮಾಡಿದ್ದು, ಅದನ್ನು ನಾನು ಪ್ರಶ್ನಿಸಿದ್ದಕ್ಕೆ ಆತನು ಏಕಾಏಕಿ ನನ್ನನ್ನು ಹಿಡಿದು ರಸ್ತೆಯಲ್ಲಿ ಎಳೆದಾಡಿ ಸಾರ್ವಜನಿಕವಾಗಿ ನನ್ನನ್ನು ಅವಮಾನಿಸಿ, ನೀನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ನಿನಗೊಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾದನು.
ರಾತ್ರಿಯಾಗಿದ್ದರಿಂದ ಈ ದಿನ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಮೇಲ್ಕಂಡ ರೀತಿಯಲ್ಲಿ ನನ್ನನ್ನು ವ್ಯಾಟ್ಸಪ್ ಗ್ರೂಪ್‌ಗಳಲ್ಲಿ ಅವಮಾನಿಸಿ ಹಾಗೂ ಸಾರ್ವಜನಿಕ ರಸ್ತೆಯಲ್ಲಿ ನನ್ನನ್ನು ತಡೆದು ಹಿಡಿದು ಎಳೆದಾಡಿ ನನ್ನನ್ನು ಅವಮಾನಿಸಿರುವ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಕೂಟದ ಮಹಿಳಾಧ್ಯಕ್ಷೆ ಚಂಪಕಾವತಿ ಅವರು ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 341, 504, 354, 509, 506ರಡಿ ನಾಲ್ವರ ವಿರುದ್ಧ ವಿಲ್ಸನ್ ಗಾರ್ಡ್‌ನ್ ಪೊಲೀಸ್‌ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.