ಬೆಂಗಳೂರು: ಚೀನಾಗೆ ತೊಂದರೆ ನೀಡಲು ಭೂತಾನ್‌ನಿಂದ 17 ಸಾವಿರ ಮೆಟ್ರಿಕ್ ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ಆರಗ ಜ್ಞಾನೇಂದ್ರ ಹೇಳಿಕೆ ಮೂರ್ಖತನದಿಂದ ಕೂಡಿದ್ದು, 40% ಕಮಿಷನ್‌ಗಾಗಿ ಅಡಿಕೆ ಬೆಳೆಗಾರರ ಹಿತವನ್ನು ಬಲಿಕೊಡಲಾಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.
ಆಮ್ ಆದ್ಮಿ ಪಾರ್ಟಿ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, “ಅಡಿಕೆ ಟಾಸ್ಕ್‌ಫೋರ್ಸ್ ಅಧ್ಯಕ್ಷರಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಡಿಕೆ ಬೆಳೆಗಾರರ ಹಿತದ ಪರವಾಗಿ ಯೋಚಿಸಬೇಕು. ಆದರೆ ಅವರು ರೈತರ ಗಮನವನ್ನು ಚೀನಾ ವಿಷಯದತ್ತ ತೆಗೆದುಕೊಂಡು ಹೋಗುವ ಮೂಲಕ ರೈತರಿಗೆ ವಂಚಿಸುತ್ತಿದ್ದಾರೆ. ಅಡಿಕೆ ಬೆಳೆಗಾರರ ಹಿತವನ್ನು ಬಲಿಕೊಟ್ಟು ಚೀನಾಗೆ ತೊಂದರೆ ನೀಡಲು ಯತ್ನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾಳುಮೆಣಸು ಬೆಳೆಗಾರರಿಗೆ ಕೆಜಿಗೆ 850 ರೂಪಾಯಿ ಸಿಗುತ್ತಿತ್ತು. ವಿಯೆಟ್ನಾಂನಿಂದ ಆಮದು ಆರಂಭಿಸಿದ್ದರಿಂದ ಅದರ ಬೆಲೆ 500 ರೂಪಾಯಿಗೆ ಕುಸಿದಿದೆ. ಇದರಿಂದ ರೈತರಿಗೆ ಪ್ರತಿ ಕೆಜಿಗೆ 350 ನಷ್ಟವಾಗುತ್ತಿದೆ. ದೇಶದಲ್ಲಿ 30 ಸಾವಿರ ಮೆಟ್ರಿಕ್ ಟನ್ ಕಾಳುಮೆಣಸು ಉತ್ಪಾದನೆಯಾಗುತ್ತಿದ್ದು, ರೈತರಿಗೆ ಒಟ್ಟು 1.26 ಲಕ್ಷ ಕೋಟಿ ರೂ. ನಷ್ಟವಾಗಿದೆ. ಇದರಿಂದ ಯಾರಿಗೆ ಲಾಭವಾಗುತ್ತಿದೆ ಎಂದು ನಾವು ಯೋಚಿಸಬೇಕು ಎಂದರು.
ಇನ್ನು ಬಿಜೆಪಿಯ ನಾಯಕರು ಹಾಗೂ ಪ್ರಭಾವಿಗಳಿಗೆ ಕಮಿಷನ್ ರೂಪದಲ್ಲಿ ಈ ಹಣ ತಲುಪುತ್ತಿದೆ. ಇದೊಂದು ದೊಡ್ಡ ದಂಧೆಯಾಗಿದೆ. ಇದರ ತನಿಖೆ ಮಾಡಬೇಕಾದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಿಜೆಪಿಯ ಆದೇಶದಂತೆ ದೆಹಲಿಯ ಎಎಪಿ ನಾಯಕರ ವಿರುದ್ಧ ಸುಳ್ಳು ಆರೋಪ ಹೊರಿಸುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಭೂತಾನ್‌ನಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಆಮದುದಾರರ ಹೆಸರನ್ನು ಸರ್ಕಾರ ಬಹಿರಂಗ ಪಡಿಸಲಿ. ಎಷ್ಟು ಮೊತ್ತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ, ಇದರಿಂದ ಆಮದುದಾರರಿಗೆ ಎಷ್ಟು ಲಾಭವಾಗುತ್ತದೆ ಎಂಬ ಮಾಹಿತಿಯನ್ನು ನೀಡಲಿ. ಎಲ್ಲವೂ ಪಾರದರ್ಶಕವಾಗಿ ಜನರಿಗೆ ತಿಳಿಯಲಿ ಎಂದು ಬ್ರಿಜೇಶ್ ಕಾಳಪ್ಪ ಆಗ್ರಹಿಸಿದರು.