ದಾವಣಗೆರೆ: ಅಖಿಲ ಕರ್ನಾಟಕ ಸಾರಿಗೆ ನೌಕರರ ಮಹಾ ಸಮ್ಮೇಳನಕ್ಕೆ ಆಹ್ವಾನಿತರಾದ ಯಾವೊಬ್ಬ ಆಡಳಿತಾರೂಢ ರಾಜಕಾರಣಿಗಳು ಆಗಮಿಸದೇ ಇದ್ದದ್ದು ನಿರೀಕ್ಷಿತವೇ ಆಗಿದ್ದರೂ ಕೊನೇ ಪಕ್ಷ ಸಾರಿಗೆ ಸಚಿವರಾದರೂ ಬಂದು ಮತ್ತೊಮ್ಮೆ ಹುಸಿ ಭರವಸೆ ನೀಡುತ್ತಾರೆ ಎನ್ನುವುದನ್ನು ಸುಳ್ಳು ಮಾಡಿದಕ್ಕೆ ಸಾರಿಗೆ ಸಚಿವರಿಗೆ ಸದಾ ಸಾರಿಗೆ ನೌಕರರ ಹಿತ ಬಯಸುವ ಮೃತ್ಯುಂಜಯ ಹಿರೇಮಠ ಧನ್ಯವಾದ ತಿಳಿಸಿದ್ದಾರೆ.
ಆಡಳಿತ ಮಂಡಳಿಯಿಂದ ಆಹ್ವಾನಿತರಾಗಿ ಸಮಾವೇಶಕ್ಕೆ ಅಧಿಕಾರಿಗಳು ಬಾರದೇ ಮಗದೊಮ್ಮೆ ನೌಕರರು ತಮಗೆ ನಗಣ್ಯ ಎಂದು ತೋರಿಸಿಕೊದುವುದಕ್ಕೋ ಅಥವಾ ತಾವು ಏನಿದ್ದರೂ ನೌಕರರಿಗೆ ಕಿರುಕುಳ ನೀಡುವುದೇ ನಮ್ಮ ಉದ್ದೇಶ ತಮಗೆ ಹಿತವಚನ ಎಂಬ ಪದದ ಅರ್ಥ ಗೊತ್ತೇ ಇಲ್ಲ ಎನ್ನುವ ಧೋರಣೆಯನ್ನು ಮುಂದುವರಿಸಿಕೊಂಡು ಹೋಗುವುದು ಸೂಕ್ತ ಎಂಬ ಕಾರಣಕ್ಕೆ ಭಾಗವಹಿಸದೇ ಇರುವುದಕ್ಕೆ ಅವರಿಗೂ ಧನ್ಯವಾದಗಳು.
ಯಾವುದೇ ಸಂಘಟನೆ ಕಳೆದ 15 ತಿಂಗಳಿನಿಂದ ಅಂದರೆ ಮುಷ್ಕರದ ನಂತರ ನೌಕರರ ಬಗ್ಗೆ ಕ್ಯಾರೇ ಎನ್ನದವರು ಮೊನ್ನೆ ಜುಲೈ 12 ರಂದು ಜಂಟಿ ಸಂಘಟನೆಗಳ ಸಭೆ ಕರೆದದ್ದನ್ನು ನೋಡಿದರೆ ಅವರಿಗೆ ಈಗ ಜ್ಞಾನೋದಯ ಆಗಿದೆ ಎಂದು ಭಾವಿಸೋಣ. ಆದರೂ ಸಹ ಅಂದಿನ ಜಂಟಿ ಸಭೆಯಲ್ಲಿ ಕೂಟದ ಸಮಾವೇಶದ ಬಗ್ಗೆ ಕೊಂಕು ಮಾತನಾಡಿದವರಿಗೆ ಈ ಸಮ್ಮೇಳನ ಎಚ್ಚರಿಕೆ ಘಂಟೆ ನೀಡಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಈ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು ಎಚ್ಚರಿಕೆ ಮಿಶ್ರಿತ ಆಶೀರ್ವಚನ ನೀಡಿದಕ್ಕಾಗಿ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ ಹಾಗೂ ಸ್ವಾಮೀಜಿಗಳು ಹೇಳಿದಂತೆ ನೌಕರರೂ ಮತ್ತು ಸಂಘಟನೆಗಳು ಬುಸುಗುಡುತ್ತಲೇ ಇರಬೇಕು. ಈ ಕೆಲಸ ಮಾಡುತ್ತಾ ಇರುವುದು ಕೇವಲ ಕೂಟ ಮಾತ್ರ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹಾಗಂತ ಕಚ್ಚಲೇಬಾರದು ಎಂದು ಅಲ್ಲ. ಕಚ್ಚುವ ಸಮಯ ಸಹ ದೂರ ಇಲ್ಲ. ಮುಂದಿನ ಚುನಾವಣೆಯಲ್ಲಿ ಸರಿಯಾಗಿ ಕಚ್ಚಿ ಸಾರಿಗೆ ನೌಕರರ ವಿಷ ಏನು ಎನ್ನುವುದನ್ನು ತೋರಿಸೋಣ ಈಗಾಗಲೇ ಇದರ ಅನುಭವ ಕೆಲವರು ಅನುಭವಿಸಿ ಆಗಿದೆ ಎಂದು ತಿಳಿಸಿದ್ದಾರೆ.
ಈಗಲಾದರೂ ಉಳಿದ ಸಂಘಟನೆಗಳು ಇದೇ ಜುಲೈ 21 ರಂದು ಸೇರುವ ಜಂಟಿ ಸಂಘಟನೆಯ ಸಭೆಯಲ್ಲಿ ತಮ್ಮ ತಮ್ಮ ವೈಯುಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಸಮಾವೇಶದಲ್ಲಿ ಇಟ್ಟ ಬೇಡಿಕೆಗಳ ಬಗ್ಗೆ ಒಕ್ಕೊರಲಿನ ಅಭಿಪ್ರಾಯಗಳನ್ನು ಸರಕಾರ/ ಆಡಳಿತ ಮಂಡಳಿ ಮುಂದೆ ಮಂಡಿಸಲಿ ಎಂದು ಬಯಸುತ್ತಿರುವುದಾಗಿ ಹೇಳಿದ್ದಾರೆ.