ಬಾದಾಮಿ: ಬಾಗಲಕೋಟೆ ಜಿಲ್ಲೆ ಬಾದಾಮಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾತ್ರಿ ಪಾಳಿಯ ಬಸ್‌ಗಳ ಚಾಲಕ ಹಾಗೂ ನಿರ್ವಾಹಕರಿಗೆ ಕೊಠಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಪತ್ರ ಬರೆದಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾತ್ರಿ ತಂಗುವ (ವಸ್ತಿ) ಬಸ್ಸುಗಳು ನನ್ನ ಬಾದಾಮಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಶಾಲಾ, ಕಾಲೇಜು ಮಕ್ಕಳ ಹಿತದೃಷ್ಟಿಯಿಂದ ಇರುತ್ತಿದ್ದು, ಬಸ್ಸುಗಳಲ್ಲಿ ತಂಗಲು ಚಾಲಕ ಹಾಗೂ ನಿರ್ವಾಹಕರಿಗೆ ತುಂಬಾ ಅನಾನುಕೂಲವಾಗುತ್ತಿದೆ.
ಅಲ್ಲದೆ ಸಿಬ್ಬಂದಿಗಳ ಹತ್ತಿರ ಟಿಕೆಟ್, ಪ್ರಯಾಣದ ಹಣವು ಇರುತ್ತಿದ್ದು, ಇದರ ಸುರಕ್ಷತೆಯ ಸಲುವಾಗಿ ನನ್ನ ಬಾದಾಮಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಎಲ್ಲ ವಸ್ತಿ ಬಸ್ಸುಗಳ ಸಿಬ್ಬಂದಿಯವರ ಹಿತದೃಷ್ಟಿಯಿಂದ ತಾವು ಬಸ್ಸಿನ ಸಿಬ್ಬಂದಿಯವರಿಗೆ ಆಯಾ ಗ್ರಾಮದ ಶಾಲೆಗಳಲ್ಲಿನ ಅಥವಾ ಪಂಚಾಯಿತಿಯಲ್ಲಿನ ಒಂದು ಕೊಠಡಿಯನ್ನು ಹಾಗೂ ಶೌಚಾಲಯ ವ್ಯವಸ್ಥೆಯೊಂದಿಗೆ ಸೌಲಭ್ಯ ಕಲ್ಪಿಸುವಂತೆ ತಮ್ಮಲ್ಲಿ ಕೋರುತ್ತಿದ್ದೇವೆ ಎಂದು ತಿಳಿಸಿದ್ದಾರೆ.