ಅಮೀನಗಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನ ಮೇಲೆ ಹಲ್ಲೆ ಮಾಡಿದ ಪ್ರಯಾಣಿಕರಿಬ್ಬರ ವಿರುದ್ದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗ ಹುನಗುಂದ ಘಟಕದ ಚಾಲಕ ಕಂ ನಿರ್ವಾಹಕ ಯಲ್ಲಪ್ಪ ಲಕ್ಷ್ಮಣ ದಡ್ಡಿ ಹಲ್ಲೆಗೊಳಗಾದವರಾಗಿದ್ದು ಈ ಸಂಬಂಧ ರಾಹುಲ ಎಂಬಾತ ಸೇರಿದಂತೆ ಇಬ್ಬರು ಆರೋಪಿಗಳ ವಿರುದ್ದ ಅಮೀನಗಡ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಲಾಗಿದೆ.
ದೂರಿನಲ್ಲೇನಿದೆ? ಚಾಲಕ ಕಂ ನಿರ್ವಾಹಕ ಯಲ್ಲಪ್ಪ ಲಕ್ಷ್ಮಣ ದಡ್ಡಿ ಅವರು ಫೆ.9 ರಂದು ಹುನಗುಂದದಿಂದ ಬಾಗಲಕೋಟೆಗೆ ಹೋಗುವ ವೇಳೆ ರಾತ್ರಿ ಸುಮಾರು 7:15ಕ್ಕೆ ಬಸ್ ಹುನಗುಂದವನ್ನು ಬಿಟ್ಟು ಬಾಗಲಕೋಟೆ ಕಡೆಗೆ ಹೊರಟು ಅಮೀನಗಡ ಬಸ್ ನಿಲ್ದಾಣವನ್ನು 7:45ಕ್ಕೆ ತಲುಪಿ ಪ್ರಯಾಣಿಕರನ್ನು ಇಳಿಸಿ ಮತ್ತೆ ಹತ್ತಿದ ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಿದ್ದೆ.
ಈ ವೇಳೆ ಬಸ್ ಹತ್ತಿದ ಪ್ರಯಾಣಿಕರಲ್ಲಿ ಇಬ್ಬರು ಯುವಕರು ಇದ್ದರು. ನಾನು ಅವರನ್ನು ಟಿಕೆಟ್ ಪಡೆದುಕೊಳ್ಳಲು ಕೇಳಿದಾಗ ಹಣ ಇಲ್ಲ ಪೋನ್ ಫೆ ಮಾಡುತ್ತೇವೆ ಅಂತ ಹೇಳಿದ್ದರಿಂದ ಫೋನ್‌ಫೇ ಯುಪಿ ಐಡಿಯನ್ನು ಅವರ ಮುಂದೆ ಹಿಡಿದಾಗ ಅವರು ಮುಂದೆ ಹತ್ತಿರದಲ್ಲಿರುವ ಬಸವನ ದೇವರ ಗುಡಿ ಹತ್ತಿರ ಸೈಡಿಗೆ ಹಾಕು ಎಂದು ಬೆದರಿಸಿದರು.
ಅಲ್ಲದೆ ಈ ವೇಳೆ ಅಮೀನಗಡ ಬಿಟ್ಟು ಎಪಿಎಂಸಿಯ ವರೆಗೆ ಬಸ್ ಎಲ್ಲೂ ನಿಲ್ಲಿಸಬಾರದು ಅಂತ ಬೈಯುತ್ತಾ ಚಾಲಕ ಕಂ ನಿರ್ವಾಹಕನಾಗಿ ಡ್ಯೂಟಿ ಮಾಡುತ್ತಿದ್ದ ನನಗೆ ಅಂದರೆ ಚಾಲಕನ ಆಸನದಲ್ಲಿ ಕುಳಿತಿದ್ದ ನನ್ನ ಮೇಲೆ ಕೈಯಿಂದ ಹಲ್ಲೇ ಮಾಡಿ ಎಳೆದಾಡಿ ನನ್ನ ಕೈಯಲ್ಲಿದ್ದ ಬಸ್ ಟಿಕೆಟ್, 12,137 ರೂ.ಗಳನ್ನು ಇಬ್ಬರೂ ಸೇರಿ ಕಸೆದುಕೊಳ್ಳತೊಡಗಿದಾಗ ನಾನು ಬಿಗಿಯಾಗಿ ಹಿಡಿದರೂ ಕೂಡಾ ಇಬ್ಬರು ಸೇರಿ ಬಲವಂತವಾಗಿ ಕಸೆದುಕೊಂಡರು. ಈ ವೇಳೆ ನನ್ನ ಬಳಿ 1,300 ರೂ. ಮಾತ್ರ ಉಳಿಯಿತು.
ಅವರು ತಕ್ಷಣ ಆ ಹಣ ಕಸೆದುಕೊಂಡು ಓಡಿಹೋದರು. ಅವರಲ್ಲಿ ಒಬ್ಬನ ಹೆಸರು ರಾಹುಲ, ಇನ್ನೊಬ್ಬನ ಹೆಸರು ಗೊತ್ತಾಗಿಲ್ಲ ಎಂದು ಚಾಲಕ ಯಲ್ಲಪ್ಪ ಲಕ್ಷ್ಮಣ ದಡ್ಡಿ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಚಾಲಕ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.