ತಿ.ನರಸೀಪುರ: ತಾಲೂಕಿನ ಬನ್ನೂರು ಸಮೀಪದ ಎಂ.ಎಲ್. ಹುಂಡಿ (ಮದ್ಗಾರ್ ಲಿಂಗಯ್ಯನ ಹುಂಡಿ) ಗ್ರಾಮದ ಹತ್ತಿರ ಇರುವ ಮಲ್ಲಪ್ಪನ ಬೆಟ್ಟದಲ್ಲಿ ಯುವಕನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಎಂ.ಎಲ್. ಹುಂಡಿ ಗ್ರಾಮದ ನಿವಾಸಿ ಚೆನ್ನಮಲ್ಲ ದೇವರು ಎಂಬುವರ ಪುತ್ರ ಮಂಜುನಾಥ್ (20) ಚಿರತೆ ದಾಳಿಗೆ ಬಲಿಯಾದ ಯುವಕ. ಈತ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದ, ರಜೆ ಇರುವುದರಿಂದ ಗ್ರಾಮಕ್ಕೆ ಬಂದಿದ್ದ ಎಂದು ತಿಳಿದು ಬಂದಿದೆ.
ತಾಲೂಕಿನ ಬೆಟ್ಟಗಳಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು ಮಲ್ಲಪ್ಪನ ಬೆಟ್ಟದಲ್ಲಿ ಹಸು ಮೇಯಿಸಲು ಹೋಗಿದ್ದ ಮೈಸೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುದ್ದ ಮಂಜುನಾಥ್ ಅವರ ಮೇಲೆ ಚಿರತೆ ದಾಳಿ ಮಾಡಿದ್ದು, ಕುತ್ತಿಗೆಯನ್ನು ಕಚ್ಚಿ ಸಾಯಿಸಿದೆ.
ಹಲವಾರು ದಿನಗಳಿಂದಲೂ ಈ ಭಾಗದಲ್ಲಿ ಚಿರತೆ ಹಾವಳಿ ಜಾಸ್ತಿಯಾಗಿದ್ದು ಯುವಕನನ್ನು ಕೊಂದು ಹಾಕಿದೆ. ಅಲ್ಲದೆ ಈ ಹಿಂದೆ ಮೇಕೆಯನ್ನು ಎಳೆದುಕೊಂಡು ಹೋಗಿತ್ತು. ಆದರೆ ಆ ಮೇಕೆ ದೊಡ್ಡದಿದ್ದರಿಂದ ಅದು ಚಿರತೆ ಹೊತ್ತುಕೊಂಡು ಹೋಗಿರುವುದಲ್ಲ ಯಾರೋ ಕಳ್ಳರು ಮಾಡಿದ್ದಾರೆ ಎಂದು ಜನ ನಂಬಿದ್ದರು. ಹೀಗಾಗಿ ಚಿರತೆಯ ಬಗ್ಗೆ ಹೆಚ್ಚಯ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬನ್ನೂರು ಪೊಲೀಸ್ ಠಾಣೆ ಪೊಲೀಸರು ಭೇಟಿನೀಡಿದ್ದು, ಮೃತ ದೇಹವನ್ನು ಬನ್ನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸುತ್ತಿದ್ದಾರೆ.