ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಬಡವರ ಮನೆ ಮೇಲೆ ಸಿಂಹದಂತೆ ಗರ್ಜಸುತ್ತಿದ್ದಾರೆ, ಆದರೆ ಪ್ರಭಾವಿಗಳ ಮನೆ ಎಂದರೆ ನರಿಯಂತೆ ಮಂಕಾಗುತ್ತಾರೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಅದಕ್ಕೆ ನಿದರ್ಶನ ಎಂಬಂತೆ ಅಧಿಕಾರಿಗಳು ಕೂಡ ಅದೇ ರೀತಿ ನಡೆದುಕೊಂಡಿರುವುದು ಮಂಗಳವಾರ ಕಂಡು ಬಂತು.
ರಾಜಕಾಲುವೆ ಒತ್ತುವರಿ ತೆರವು ಮಾಡಲು ಮಾರ್ಕಿಂಗ್ ಮಾಡಿಕೊಂಡು ಬಂದ ಪಾಲಿಕೆ ಅಧಿಕಾರಿಗಳು, ದೊಡ್ಡವರ ಕಾಂಪೌಂಡ್ ಮಾತ್ರ ಕೆಡವಿ, ಬಡವರ ಮನೆಗಳನ್ನು ನೆಲಸಮ ಮಾಡಿದರು. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಗುಬ್ಬಿ ಮೇಲಷ್ಟೇ ಅಧಿಕಾರಿಗಳ ಬ್ರಹ್ಮಾಸ್ತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
18 ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಳವಾರ ಮಹದೇವಪುರ ವಲಯ ಹಾಗೂ ಯಲಹಂಕ ವಲಯ ಸೇರಿದಂತೆ ಒಟ್ಟು 18 ಕಡೆ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಶಾಂತಿನಿಕೇತನ ಲೇಔಟ್, ಪಾಪಯ್ಯ ರೆಡ್ಡಿ ಲೇಔಟ್, ಚೆಲ್ಲಘಟ್ಟ ಹಾಗೂ ಯಲಹಂಕ ವಲಯ ಸ್ಯಾಟಲೈಟ್ ಟೌನ್‌ನಲ್ಲಿ ರಾಜಕಾಲುವೆ ಒತ್ತುವರಿ ಮಾಡಲಾಯಿತು. ಪಾಲಿಕೆಯ ಎಂಜಿನಿಯರ್‌ಗಳು, ಕಂದಾಯ ಅಧಿಕಾರಿಗಳು, ಮಾರ್ಷಲ್‌ಗಳು, ಪೊಲೀಸ್ ಸಿಬ್ಬಂದಿಯ ಭದ್ರತೆಯೊಂದಿಗೆ 2 ಹಿಟಾಚಿ ಹಾಗೂ 8 ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು.
ಮಹದೇವಪುರ ವಲಯ ಚೆಲ್ಲಘಟ್ಟದ ಸರ್ವೇ ಸಂ. 70/14 ರಲ್ಲಿರುವ ನಲಪಾಡ್ ಅಕಾಡೆಮಿ ವತಿಯಿಂದ 2.5 ಮೀಟರ್ ಅಗಲ ಹಾಗೂ 150.5 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ರಾಜಕಾಲುವೆಯ ಮೇಲೆ ಕಾಂಕ್ರೀಟ್ ಅಳವಡಿಸಿ ಎತ್ತರವಾಗಿ ಕಾಂಪೌಂಡ್ ಗೋಡೆ ಹಾಗೂ ಕಾಂಪೌಂಡ್ ಗೋಡೆಯ ಮೇಲೆ ಫೆನ್ಸಿಂಗ್ ಅಳವಡಿಸಲಾಗಿದೆ. ಆ ಒತ್ತುವರಿಯಲ್ಲಿ ಇಂದು ಸುಮಾರು 50 ಮೀಟರ್ ನಷ್ಟು ಒತ್ತುವರಿ ತೆರವು ಮಾಡಲಾಗಿದೆ.
ಶಾಂತಿನಿಕೇತನ ಲೇಔಟ್ ನಲ್ಲಿ 7 ಕಟ್ಟಡ ಹಾಗೂ 4 ಕಾಂಪೌಂಡ್ ಗೋಡೆಗಳನ್ನು ತೆರವುಗೊಳಿಸಲಾಗಿರುತ್ತದೆ. ಪಾಪಯ್ಯ ರೆಡ್ಡಿ ಲೇಔಟ್ ನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಅಪಾರ್ಟ್ಮ್ಂಟ್ ಗೋಡೆ ಹಾಗೂ ರಾಜಕಾಲುವೆಯ ಖಾಲಿ ಜಾಗದ ಮೇಲೆ ನಿರ್ಮಿಸಿಕೊಂಡಿದ್ದ 4 ಶೇಡ್ ಗಳನ್ನು ತೆರವುಗೊಳಿಸಲಾಗಿದೆ. ಬಸವನಪುರದಲ್ಲಿ 1 ಕಾಂಪೌಂಡ್ ಗೋಡೆ ಹಾಗೂ 1 ಖಾಲಿ ಜಾಗದ ಒತ್ತುವರಿ ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಲಾಗಿದೆ.
ಯಲಹಂಕ ವಲಯದ ಸ್ಯಾಟಲೈಟ್ ಟೌನ್ ವ್ಯಾಪ್ತಿಯಲ್ಲಿ ಎನ್.ಸಿ.ಬಿ.ಎಸ್ ಇನ್ಸ್ಟಿಟ್ಯೂಟ್ ವತಿಯಿಂದ 120 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಜೆಸಿಬಿಯ ಮೂಲಕ ತೆರವುಗೊಳಿಸಲಾಗಿದೆ.
ನಗರದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಭೂಮಾಪಕರ ಮೂಲಕ ಸಮೀಕ್ಷೆ ಮಾಡಿ ಮಾರ್ಕಿಂಗ್ ಮಾಡಿಕೊಂಡು ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ಆಗಿರುವ ಪ್ರದೇಶಗಳ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.