ಇದರ ಹಿಂದೆ ಮಹಾನ್ ನಾಯಕರ ಕೈವಾಡವಿದೆ : ಇಷ್ಟಕ್ಕೆ ಬಿಡೋದಿಲ್ಲ ಅಂತ ಎಚ್‌ಡಿಕೆ ಗರಂ
ಹುಬ್ಬಳ್ಳಿ: ನಮ್ಮ ಬಳಿಯೂ ಕೆಲ ವಿಡಿಯೋಗಳು ಇವೆ. ಎಲ್ಲ ಆಯಾಮಗಳಲ್ಲಿ ತನಿಖೆಯಾಗಬೇಕು ಎಂದು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣನದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಮತ್ತು ಪೆನ್ಡ್ರೈವ್ ಹಂಚಿಕೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇದರ ಹಿಂದೆ ಮಹಾನ್ ನಾಯಕರ ಕೈವಾಡವಿದೆ. 2012 ರಲ್ಲಿ ನಡೆದ ಪ್ರಕರಣಕ್ಕೆ ಜೀವ ಕೊಟ್ಟವರು ಮಹಾನ್ ನಾಯಕ. ಮಹಿಳೆಯರ ಬಗ್ಗೆ ಮಾತಾಡೋ ಮಹಾನ್ ನಾಯಕನಿಂದ ಮಾನ ಹರಾಜು ಆಗಿದೆ ಎಂದು ಹೇಳಿದ್ದಾರೆ.
ನಾವು ಯಾರನ್ನೂ ರಕ್ಷಿಸೋ ಪ್ರಶ್ನೆಯೇ ಇಲ್ಲ: ಜೆಡಿಎಸ್ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಎಚ್‌ಡಿಕೆ ಪಕ್ಷದ ಇಮೇಜ್‌ಗೆ ಧಕ್ಕೆಯಾಗಬಾರದೆಂಬ ಕಾಳಜಿ ಇದೆ. ಅದೇ ಕಾಳಜಿ ನಮ್ಮದೂ ಕೂಡ ಎಂದು ಹೇಳಿದರು.
ಇನ್ನು ಇಲ್ಲಿ ಯಾರನ್ನೂ ಕ್ಷಮಿಸೋ ಪ್ರಶ್ನೆಯೇ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ನಾವು ಯಾರನ್ನೂ ರಕ್ಷಿಸೋ ಪ್ರಶ್ನೆಯೇ ಇಲ್ಲ. ಸರ್ಕಾರ ತನ್ನದೇ ಆದ ತನಿಖೆ ಮಾಡಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.
ನಾನು ಇದನ್ನು ಇಷ್ಟಕ್ಕೇ ಬಿಡೋದಿಲ್ಲ: ಕೋರ್ ಕಮಿಟಿ ಸಭೆಗೂ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಸಿದ ಎಚ್‌ಡಿಕೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಹೇಳಿದ್ದಾರೆ? ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲ ಎಂದಿದ್ದಾರೆ. ಇದನ್ನು ಹೊರತುಪಡಿಸಿ ಪ್ರಜ್ವಲ್ ಪ್ರಕರಣ ಪ್ರಸ್ತಾಪಿಸಿಲ್ಲ ಎಂದ ಅವರು, ಕಾಂಗ್ರೆಸ್ ಪುಡಾರಿಗಳು ನಮ್ಮ ಮನೆ ಮುಂದೇಕೆ ಪ್ರತಿಭಟನೆ ಮಾಡಬೇಕು. ಮಹಾನ್ ನಾಯಕರ ಮನೆ ಮುಂದೆ ಪ್ರತಿಭಟಿಸಲಿ. ನಾನು ಇದನ್ನು ಇಷ್ಟಕ್ಕೇ ಬಿಡೋದಿಲ್ಲ ಎಂದು ಎಚ್‌ಡಿಕೆ ಗರಂ ಆದರು.