ಬೆಂಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಪರಿಷತ್ ಕಲಾಪದಲ್ಲಿ ಚರ್ಚಿಸಲು ಆಮ್ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದ ನಿಯೋಗವು 24 ವಿಷಯಗಳನ್ನು ಪಟ್ಟಿ ಮಾಡಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆಯವರಿಗೆ ಸಲ್ಲಿಸಿತು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ರಾಜ್ಯದ ಎಲ್ಲ 31 ಜಿಲ್ಲೆಗಳ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ರೈತರು, ನೌಕರರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ವಿವಿಧ ವರ್ಗಗಳ ಜನರ ಜತೆ ಚರ್ಚಿಸಿದ್ದಾರೆ. ಈ ಮೂಲಕ ಸಂಗ್ರಹಿಸಿದ ಮಾಹಿತಿಗಳನ್ನು ಆಧರಿಸಿ 24 ಅಂಶಗಳ ಪಟ್ಟಿಯನ್ನು ಸಿದ್ಧಪಡಿಸಿ ವಿಧಾನ ಪರಿಷತ್ ಸಭಾಪತಿಯವರಿಗೆ ಸಲ್ಲಿಸಲಾಗಿದೆ. ಅನಗತ್ಯ ಚರ್ಚೆಗಳಿಗೆ ಕಲಾಪ ಬಲಿಯಾಗುವ ಬದಲು ರಾಜ್ಯಕ್ಕೆ ಉಪಯೋಗವಾಗುವಂತಹ ಚರ್ಚೆಯಾಗಲಿ ಎಂಬ ಸದುದ್ದೇಶದಿಂದ ಎಎಪಿ ಈ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಜನಸಂಪರ್ಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯ ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಆಮ್ ಆದ್ಮಿ ಪಾರ್ಟಿಯು ಸದಸ್ಯರನ್ನು ಹೊಂದಿಲ್ಲದ ಕಾರಣ ಇದೇ ಡಿಸೆಂಬರ್ 19ರಿಂದ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಲು ಪಕ್ಷಕ್ಕೆ ಅವಕಾಶ ಇರುವುದಿಲ್ಲ. ಆದರೆ ನಮ್ಮದು ಜನಪರ ಕಾಳಜಿ ಹೊಂದಿರುವ ಪಕ್ಷವಾಗಿರುವುದರಿಂದ, ಅಧಿವೇಶನದಲ್ಲಿ ಪರೋಕ್ಷವಾಗಿಯೂ ಭಾಗಿಯಾಗದೇ ಸುಮ್ಮನಿರುವುದು ನಮ್ಮಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ವಿಧಾನ ಪರಿಷತ್ನಲ್ಲಿ ಅಗತ್ಯವಾಗಿ ಚರ್ಚಿಸಲೇಬೇಕಾದ ವಿಷಯಗಳನ್ನು ಪಟ್ಟಿ ಮಾಡಿ ಸಭಾಪತಿಯವರಿಗೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಮಾತನಾಡಿ, ವಿಧಾನಮಂಡಲ ಅಧಿವೇಶಗಳು ಸಾರ್ಥಕವಾಗಬೇಕಾದರೆ ಅಲ್ಲಿ ಜನಸಾಮಾನ್ಯರ ಸಮಸ್ಯೆಗಳು ಪ್ರತಿಧ್ವನಿಸಬೇಕು. ಆದರೆ ಬಹಳಷ್ಟು ಕಲಾಪಗಳು ಆಡಳಿತ ಪಕ್ಷ, ಪ್ರತಿಪಕ್ಷಗಳ ಕಾಲಹರಣ ಹಾಗೂ ಹಠಮಾರಿ ಧೋರಣೆಗೆ ಬಲಿಯಾಗುತ್ತಿರುವುದು ವಿಪರ್ಯಾಸ. ಆಮ್ ಆದ್ಮಿ ಪಾರ್ಟಿಯ ಆಗ್ರಹಕ್ಕೆ ಮನ್ನಣೆ ನೀಡಿ ಉಪಯುಕ್ತ ಕಲಾಪಕ್ಕೆ ಸಭಾಪತಿಯವರು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಎಎಪಿ ಮುಖಂಡರಾದ ಜೋಗಿನ್, ಜಗದೀಶ್ ವಿ. ಸದಂ, ದರ್ಶನ್ ಜೈನ್, ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್, ಚನ್ನಪ್ಪಗೌಡ ನೆಲ್ಲೂರು ಸೇರಿದಂತೆ ಹಲವು ಮುಖಂಡರು ಇದ್ದರು.
ಕಲಾಪದಲ್ಲಿ ಚರ್ಚಿಸಲು ಎಎಪಿ ಆಗ್ರಹಿಸಿದ ವಿಷಯಗಳು: 1. ಕೃಷ್ಣ ಜಲವಿವಾದ ನ್ಯಾಯಮಂಡಳಿ (ಕೆಡಬ್ಲ್ಯೂಡಿಟಿ) ಗೆಜೆಟ್ ನೋಟಿಫಿಕೇಶ್ 2013ರಲ್ಲಿ ಹೇಳಿರುವಂತೆ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524.256 ಮೀಟರ್ಗೆ ಹೆಚ್ಚಿಸುವುದು. 2. ಮಹಾರಾಷ್ಟ್ರ ಸರ್ಕಾರದ ಮಹಾಜನ್ ವರದಿಯನ್ನು ಒಪ್ಪುವುದು ಹಾಗೂ ಅದರ ಅನುಷ್ಠಾನ. 3. ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಯಿಂದ ಒಪ್ಪಿಗೆ ಪಡೆಯುವುದು ಹಾಗೂ ಮೇಕೆದಾಟು ಯೋಜನೆಯನ್ನು ಜಾರಿಗೆ ತರುವುದು.
4. ಡಿ.ಎಂ.ನಂಜುಡಪ್ಪ ಸಮಿತಿ ವರದಿಯಲ್ಲಿ ಹೇಳಿರುವಂತೆ ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ತಡೆಗೆ ಕ್ರಮ. 5. ಆರ್ಟಿಕಲ್ 371ಜೆ ಅಡಿಯಲ್ಲಿ ಹೈದರಾಬಾದ್-ಕರ್ನಾಟಕದ ಜನರಿಗೆ ನೇರ ಮೀಸಲಾತಿ ನೀಡದಿರುವುದು. 6. ಹಲವು ಬಿಜೆಪಿ ಮುಖಂಡರು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಿರುವುದರಿಂದ ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಮಾಡುತ್ತಿರುವುದು ಹಾಗೂ ರಾಜ್ಯದ ಇತರೆ ನಗರಗಳಲ್ಲಿ ಹೂಡಿಕೆ ಆಗುತ್ತಿಲ್ಲದಿರುವುದು.
7. ಸ್ಥಳೀಯ ಭಾಷೆಯಲ್ಲಿ ಬ್ಯಾಂಕ್ ಅರ್ಜಿಗಳನ್ನು ಮುದ್ರಿಸುವುದು. 8. ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಹಾರ ಇನ್ನೂ ಬಾಕಿಯಿರುವುದು. 9. ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿ ಪಡಿಸುವುದು. 10. ಸರ್ಕಾರಿ ನೌಕರರ ನೇಮಕಾತಿಯಲ್ಲಿ ಪಾರದರ್ಶಕತೆ ತರುವುದು. 11. ಬೆಂಗಳೂರು ಉಪನಗರ ಯೋಜನೆಯ ಕಾರ್ಯಾರಂಭ. 12. ಕಬ್ಬು ಬೆಳೆಗೆ ಪಂಜಾಬ್ ಮಾದರಿಯಲ್ಲಿ 3800 ರೂಪಾಯಿ ಕನಿಷ್ಠ ಬೆಲೆ ನಿಗದಿ ಪಡಿಸುವುದು. 13. ತೆಂಗಿನಕಾಯಿ-ಕೊಬ್ಬರಿ, ಅಡಕೆ, ಕಾಳುಮೆಣಸು ಸೇರಿದಂತೆ ಕೃಷಿ ಬೆಳೆಗಳಿಗೆ ಬೆಂಬಲಬೆಲೆ ನಿಗದಿ ಪಡಿಸುವುದು ಹಾಗೂ ತುರ್ತಾಗಿ ಖರೀದಿ ಕೇಂದ್ರ ತೆರೆಯುವುದು.
14. ಪಂಜಾಬ್ನಂತೆ ಕರ್ನಾಟಕದಲ್ಲಿ ಕೂಡ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದು. 15. ಗುತ್ತಿಗೆ ನೌಕರರ ನೇಮಕಾತಿಯಲ್ಲಿನ ಗೊಂದಲಗಳನ್ನು ಬಗೆಹರಿಸುವುದು.
16. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವುದು. 17. ರಾಜ್ಯದಲ್ಲಿ ಖಾಲಿಯಿರುವ 2.5 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಶೀಘ್ರವೇ ಭರ್ತಿ ಮಾಡುವುದು. 18. ಬೀದಿಬದಿ ವ್ಯಾಪಾರಿಗಳ ಶೋಷಣೆ ತಪ್ಪಿಸಲು ಸೂಕ್ತ ನೀತಿ ರೂಪಿಸುವುದು. 19. ಬಿಬಿಎಂಪಿ ವ್ಯಾಪ್ತಿಯ 27 ಕ್ಷೇತ್ರಗಳ ಅಭಿವೃದ್ಧಿ ಹಾಗೂ ರಸ್ತೆ ಸುಧಾರಣೆಗೆ ಸಂಬಂಧಿಸಿ ಶ್ವೇತಪತ್ರ ಹೊರಡಿಸುವುದು.
20. ಮಹಿಳೆಯರ ಸುರಕ್ಷತೆಗೆ ನಿರ್ಭಯ ನಿಧಿ ಸಮರ್ಪಕವಾಗಿ ಸದ್ಬಳಕೆ ಆಗುತ್ತಿಲ್ಲ. 21. ರಾಜ್ಯ ರಾಜಧಾನಿ ಬೆಂಗಳೂರಿನ ಸಂಚಾರ ನಿರ್ವಹಣೆ. 22. ಕೆಪಿಎಸ್ಸಿಯಲ್ಲಿನ ಬಾಕಿಯಿರುವ ಎಲ್ಲ ಉದ್ಯೋಗಗಳ ನೇಮಕಾತಿ. 23. ವಸತಿರಹಿತರಿಗೆ ವಸತಿ ನೀಡುವುದರಲ್ಲಿ ವಸತಿ ಇಲಾಖೆ ಸಂಪೂರ್ಣ ವಿಫಲವಾಗಿರುವುದು. 24. ವಕೀಲರ ಸಂರಕ್ಷಣಾ ಕಾಯಿದೆಯ ಶೀಘ್ರ ಜಾರಿ.