ಬೆಂಗಳೂರು: ರಾಜ್ಯದ ರೈತರ ಸಮಸ್ಯೆ ಈಡೇರಿಸುವಂತೆ ಒತ್ತಾಯಿಸಿ ಕಳೆದ 22 ದಿನದಿಂದ ಧರಣಿ ಕುಳಿತಿರುವ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಸರ್ಕಾರ ರೈತರ ಸಮಸ್ಯೆ ಬಗೆಹರಿಸಲು ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ರಾಜ್ಯ ಸರ್ಕಾರದ ನೀತಿಯ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಬೇಕು ಎಂದು ಧರಣಿ ಸ್ಥಳದಿಂದ ಜಿ.20 ಶೃಂಗಸಭೆ ಆಯೋಜಿಸಿರುವ ದೇವನಹಳ್ಳಿಯತ್ತ ಹೊರಟ ರೈತರನ್ನು ಹೆಬ್ಬಾಳ ಪ್ಲೈಓವರ್ ಬಳಿ ತೆದ ಪೊಲೀಸರು ಬಂಧಿಸಿದರು.
ಈ ವೇಳೆ ಸರ್ಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿದ ರೈತರು ಆಕ್ರೋಶ ಹೊರಹಾಕಿದರು. ಅಲ್ಲದೆ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು. ದೇಶಾದ್ಯಂತ ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡಬೇಕು. ಕೃಷಿ ಸಾಲ ನೀತಿ ಬದಲಾಗಬೇಕು, ದೇಶದ ಜನರಿಗೆ ಆಹಾರ ಉತ್ಪಾದಿಸುವ ವಲಯವಾದ ಕಾರಣ ಕೃಷಿ ಸಾಲ ಬಡ್ಡಿರಹಿತವಾಗಿ ನೀಡಬೇಕು. ರೈತರ ಮಕ್ಕಳಿಗೆ ವಿದ್ಯಾಭ್ಯಾಸದ ಸಾಲ ಬಡ್ಡಿ ರಹಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಈ ಎಲ್ಲ ಒತ್ತಾಯಗಳ ಬಗ್ಗೆ ಗಮನ ಸೆಳೆಯಲು ಹೊರಟಿದ್ದ ರೈತರ ತಂಡಗಳನ್ನು ಹೆಬ್ಬಾಳ್ ಫ್ಲೈ ಓವರ್ ಬಳಿ ರಸ್ತೆ ಮಧ್ಯದಲ್ಲಿ ತಡೆದು ಬಂಧಿಸಿದರು. ಈ ವೇಳೆ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪೊಲೀಸರನ್ನು ಯಾವ ಕಾರಣಕ್ಕಾಗಿ ತಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡದೆ, ನಿಂತರು. ಸ್ವಲ್ಪ ಸಮಯ ಪೊಲೀಸರ ಜತೆ ವಾಗ್ವಾದ ನಡೆಯಿತು. ಆಗ ಸ್ಥಳಕ್ಕೆ ಬಂದ ಹೆಬ್ಬಾಳ ವಲಯ ಪೊಲೀಸ್ ಆರಕ್ಷಕ ನಿರೀಕ್ಷಕರು ಮುಂಜಾಗ್ರತಾ ಕ್ರಮ ಎಂದು ಬಂಧಿಸಿ ಕೆಎಸ್ಆರ್ಪಿ ಮೈದಾನಕ್ಕೆ ಕರೆದೂಯ್ದರು.
ಈ ವೇಳೆ ಪೊಲೀಸ್ ದೌರ್ಜನ್ಯ, ದಬ್ಬಾಳಿಕೆಯನ್ನು ಖಂಡಿಸಿದ ರೈತರು ಬೇರೆ ಬೇರೆ ಮೂರು ತಂಡಗಳಾಗಿ ಹೊರಟ ನಮ್ಮನ್ನು ಸಕಾರಣ ನೀಡದೆ ಬಂಧಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಕಿಡಿಕಾರಿದರು.
ಇದಲ್ಲದೇ ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತವಾಗಿ 22ನೇ ದಿನವಾದ ಇಂದು ಅಹೋರಾತ್ರಿ ಧರಣಿ ಮುಂದುವರಿಸುತ್ತಿದ ಕೆಲವು ರೈತರನ್ನು ಸಹ ಮಧ್ಯಾಹ್ನ 2 ಗಂಟೆಯಲ್ಲಿ ಏಕಾಏಕಿ ಬಂಧಿಸಿ ಕರೆದೊಯ್ದಿದ್ದಾರೆ. ಈ ಮೂಲಕ ಪೊಲೀಸರು ಸ್ವಚ್ಛಾಚಾರವಾಗಿ ವರ್ತಿಸುತ್ತಿದ್ದಾರೆ. ಸರ್ಕಾರ ಪೊಲೀಸ್ ಬಲವನ್ನು ದುರ್ಬಳಕೆ ಮಾಡಿಕೊಳ್ಳುತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಆಂಜನಪ್ಪ ಪೂಜಾರ, ಮೂಕಳ್ಳಿ ಮಹದೇವಸ್ವಾಮಿ, ಬರಡನಪುರ ನಾಗರಾಜು, ಗುರುಸಿದ್ದಪ್ಪಕೋಟಗಿ, ಚಂದ್ರಶೇಖರ್ ಮೂರ್ತಿ, ಷಡಕ್ಷರಿ, ಮಂಜುನಾಥ್, ಸುರೇಶಗೌಡ, ಮುರುಗೇಶ್ ಮುಂತಾದವರು ಬಂಧನಕ್ಕೊಳಗಾದ ರೈತರು.