ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 1.70 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಇನ್ನು, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಗೆಲುವಿನ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ವಿಶೇಷವೆಂದರೆ ಕಳೆದ ನಾಲ್ಕು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬೇರೆ ಪಕ್ಷಗಳಿಗೆ ಸಾಧ್ಯವಾಗಲಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರು ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.
ಆರಂಭಿಕ ಮತ ಎಣಿಕೆ ಸುತ್ತಿನಿಂದಲೂ ಬಿ.ವೈ ರಾಘವೇಂದ್ರ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಮತ ಎಣಿಕೆ ಕೇಂದ್ರಕ್ಕೆ ಬಂದಿಲ್ಲ. ಗೀತಾ ಶಿವರಾಜ್ ಕುಮಾರ್ ಅವರು 2ನೇ ಬಾರಿಗೆ ಬಿ.ವೈ ರಾಘವೇಂದ್ರ ಎದುರು ಸೋಲುಂಡಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಜಯಭೇರಿ ಬಾರಿಸುತ್ತಿದ್ದಂತೆ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಇನ್ನು, ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಶಿವರಾಜ್ ಕುಮಾರ್ ಪರ ಭರ್ಜರಿ ಮತಯಾಚನೆ ಮಾಡಿದ್ದರು.
ಈ ಬಾರಿಯೂ ಬಿ.ವೈ.ರಾಘವೇಂದ್ರಗೆ ಗೀತಾ ಶಿವರಾಜ್‌ಕುಮಾರ್ ಪೈಪೋಟಿ ನೀಡಿದ್ದರು. ಇದರ ಜತೆಗೆ ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸ್ಪರ್ಧಿಸಿರುವುದರಿಂದ ಅಖಾಡಕ್ಕೆ ಇನ್ನಷ್ಟು ರಂಗೇರಿತ್ತು. ಮತಗಳ ಎಣಿಕೆಯಿಂದಲೂ ಬಿಜೆಪಿಯ ಬಿ.ವೈ. ರಾಘವೇಂದ್ರ ಮುನ್ನಡೆ ಪಡೆದುಕೊಂಡಿದ್ದರು.
ಸದ್ಯ 16ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. ಬಿಜೆಪಿಯ ಬಿ.ವೈ.ರಾಘವೇಂದ್ರ 5,72,359 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಗೀತಾ ಶಿವರಾಜ್ ಕುಮಾರ್ 4,0,4570 ಮತ ಮತ್ತು ಕೆ. ಎಸ್. ಈಶ್ವರಪ್ಪ 21,920 ಮತಗಳನ್ನು ಪಡೆದಿದ್ದಾರೆ.