ಬೆಂಗಳೂರು: ದೆಹಲಿಯ ಎಎಪಿ ಸರ್ಕಾರದ ʻಮೊಹಲ್ಲಾ ಕ್ಲಿನಿಕ್ʼ ಯೋಜನೆಯನ್ನು ಸರಿಯಾಗಿ ನಕಲು ಮಾಡುವುದರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ʻನಮ್ಮ ಕ್ಲಿನಿಕ್ʼ ಯೋಜನೆಯು ಕಾಟಾಚಾರ ಹಾಗೂ ಕಳಪೆ ಗುಣಮಟ್ಟಕ್ಕೆ ಸಾಕ್ಷಿಯಾಗಿವೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಹೇಳಿದರು.
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಜಗದೀಶ್ ವಿ ಸದಂ, “ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ತೆರೆದಿರುವ 500ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್‌ಗಳು ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಅಲ್ಲಿ ಪ್ರಸ್ತುತ 212 ರೀತಿಯ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಜನವರಿ 1ರಿಂದ ಇವುಗಳಿಗೆ ಇನ್ನೂ 238 ಸೇರ್ಪಡೆಯಾಗಿ ಸೇವೆಗಳ ಸಂಖ್ಯೆ 450 ತಲುಪಲಿವೆ.
ಆದರೆ ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುಣ್ಣಬಣ್ಣ ಬಳಿದು ʻನಮ್ಮ ಕ್ಲಿನಿಕ್ʼ ಎಂದು ಕರೆಯಲಾಗುತ್ತಿದೆ. ಯಾವುದೇ ಆಧುನಿಕ ಉಪಕರಣಗಳು ಹಾಗೂ ಅಗತ್ಯ ಸಂಖ್ಯೆಯ ವೈದ್ಯರಿಲ್ಲದೇ, ಕಾಟಾಚಾರಕ್ಕಾಗಿ ಯೋಜನೆಯನ್ನು ಜಾರಿಗೆ ತರಲಾಗಿದೆ” ಎಂದು ಹೇಳಿದರು.
ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವ ಈ ಹೊತ್ತಿನಲ್ಲಿ ರಾಜ್ಯ ಬಿಜೆಪಿಗೆ ಆಮ್ ಆದ್ಮಿ ಪಾರ್ಟಿಯ ಭಯ ಶುರುವಾಗಿದೆ. ಇಲ್ಲಿನ ಆರೋಗ್ಯ ಇಲಾಖೆಯ ನಿಷ್ಕ್ರಿಯತೆ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರು ಪ್ರಶ್ನಿಸುವ ಮೊದಲೇ ಏನಾದರೂ ಮಾಡಬೇಕೆಂದು, ದೆಹಲಿ ಮಾದರಿಯಲ್ಲಿ ಕ್ಲಿನಿಕ್‌ಗಳನ್ನು ತೆರೆಯಲು ಸರ್ಕಾರ ಪ್ರಯತ್ನಿಸಿದೆ.
ಕೋವಿಡ್ ಸಮಯದಲ್ಲಿ ಭಾರೀ ಅವ್ಯವಹಾರ ಮಾಡಿದ ಕಳಂಕ ಹೊತ್ತಿರುವ ಆರೋಗ್ಯ ಸಚಿವ ಡಾ. ಸುಧಾಕರ್‌ರವರಿಂದ ಕಳಪೆ ಗುಣಮಟ್ಟದ ನಮ್ಮ ಕ್ಲಿನಿಕ್‌ಗಳಲ್ಲದೇ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಬಡ ಹಾಗೂ ಮಧ್ಯಮ ವರ್ಗದ ರೋಗಿಗಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದೇ, ಕೇವಲ ಪ್ರಚಾರಕ್ಕಾಗಿ ನಮ್ಮ ಕ್ಲಿನಿಕ್‌ಗಳನ್ನು ಸರ್ಕಾರ ತೆರೆದಿದೆ ಎಂದು ಜಗದೀಶ್ ವಿ. ಸದಂ ಹೇಳಿದರು.
ಆಮ್ ಆದ್ಮಿ ಪಾರ್ಟಿಯಿಂದಾಗಿ ಬೇರೆ ಪಕ್ಷಗಳ ಯೋಚನೆಯಲ್ಲಿ ದೇಶಾದ್ಯಂತ ಬದಲಾವಣೆಗಳು ಆಗುತ್ತಿವೆ. ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಕೂಡ ಸರ್ಕಾರಿ ಶಾಲೆಗೆ ಭೇಟಿ ನೀಡದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕೆಲವು ತಿಂಗಳ ಹಿಂದೆ ಗುಜರಾತ್‌ನಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು.
ಇತ್ತ ಕರ್ನಾಟಕದ ಬಿಜೆಪಿ ಸರ್ಕಾರವು ಅಧಿಕಾರ ಸಿಕ್ಕಿ ಮೂರು ವರ್ಷಗಳ ನಂತರ ಶಾಲೆಗಳ ಶೌಚಾಲಯಗಳ ಬಗ್ಗೆ ಯೋಚಿಸುತ್ತಿದೆ ಹಾಗೂ ಜನಸಾಮಾನ್ಯರ ಆರೋಗ್ಯದ ಬಗ್ಗೆ ಯೋಚಿಸುತ್ತಿದೆ. ಆದರೆ ಭ್ರಷ್ಟ ಬಿಜೆಪಿಯು ಆಮ್ ಆದ್ಮಿ ಪಾರ್ಟಿಯ ಮಾರ್ಗ ಅನುಸರಿಸಲು ಕೇವಲ ಪ್ರಯತ್ನ ಪಡಬಹುದೇ ಹೊರತು, ಆಮ್ ಆದ್ಮಿ ಪಾರ್ಟಿಯಂತೆ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂದು ಜಗದೀಶ್ ವಿ. ಸದಂ ಹೇಳಿದರು.