ಬೆಳಗಾವಿ: ಬಿಜೆಪಿ ಸರ್ಕಾರಕ್ಕೆ ಕೇಸರಿಕರಣಗೊಳಿಸುವ ಧಮ್ ಇಲ್ಲ ಎಂದು ಆಮ್ ಆದ್ಮಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದ್ದಾರೆ.
ಗುರುವಾರ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಲ್ಲಿ ಭಾಗಿಯಾದ ಸಚಿವರ ಮೇಲೆ ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಳ್ಳುವಲ್ಲಿ ಹಿಂದೆಟ್ಟು ಹಾಕುತ್ತಿರುವುದಾದರು ಏಕೆ ಎನ್ನುವುದನ್ನು ನಾಳೆ ಮಂಗಳೂರಿಗೆ ಬಂದಾಗ ಸ್ಪಷ್ಟಪಡಿಸಬೇಕು ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಬಿಟ್ ಕ್ವಾಯಿನ್ ಹಗರಣದ ಪ್ರಕರಣ ಎಲ್ಲಿಗೆ ಬಂತು ಎಂದು ಪ್ರಶ್ನಿಸಿದ ಅವರು, ಸಾರಿಗೆ ಇಲಾಖೆ ಸೇರಿದಂತೆ ಸಾಕಷ್ಟು ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿಯವರೆಗೂ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಬರುತ್ತಿದ್ದಾರೆ. ಸ್ವಾತಂತ್ರ್ಯದ ದಿನ ಕೆಂಪುಕೋಟೆಯ ಮೇಲೆ ಭಾಷಣದ ವೇಳೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಹೇಳಿದ್ದು ಸ್ವಾಗತಾರ್ಹ. ಆದರೆ ಕರ್ನಾಟಕದ ಬಗ್ಗೆ ಮೋದಿ ಅವರು ತಿಳಿದುಕೊಳ್ಳಬೇಕಿದೆ ಎಂದರು.
ಗುತ್ತಿಗೆದಾರರು ರಾಜ್ಯ ಸರಕಾರದ ವಿರುದ್ಧ 50 ಪ್ರತಿಶತ ಸರಕಾರ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರೂ ಕರ್ನಾಟಕದ ಬಗ್ಗೆ ಮೋದಿ ಅವರು ಮೌನವಾಗಿರುವುದು ನಾನಾ ಅನುಮಾನಕ್ಕೆ ಕಾರಣವಾಗಿದೆ ಎಂದರು.
ಗೃಹ ಸಚಿವ ಆರಗ್ ಜ್ಞಾನೇಂದ್ರ ಪಿಎಸ್ಐ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದ್ದರು. ಆದರೆ ಇದರಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಶಾಮಿಲಾಗಿದ್ದು ಬಹಿರಂಗವಾಗಿದೆ. ಇದರ ಹಿಂದೆ ರಾಜಕಾರಣಿಗಳ ಕೈವಾಡ ಇರುವುದು ಎಲ್ಲರಿಗೂ ತಿಳಿದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಮುನಿರತ್ನ ಮೇಲೆ ಕ್ರಮ ಕೈಗೊಳ್ಳಲು ಹಿಂದೆಟ್ಟು ಹಾಕುತ್ತಿದ್ದಾರೆ. ಮಂಗಳೂರಿಗೆ ಬರುವ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎನ್ನುವುದು ಕಾದು ನೋಡಬೇಕೆಂದರು.
ನ್ಯಾಯಾಲಯದಿಂದ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಬಲ ನೀಡಿದೆ. ಅದು 20 ದಿನ ಕಳೆದರೂ ಇಲ್ಲಿಯವರೆಗೆ ಎಸಿಪಿಯ ಪ್ರಕರಣವನ್ನು ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಿಲ್ಲ ಎಂದು ಹರಿಹಾಯ್ದರು.
ರಾಷ್ಟ್ರೀಯ ಪಕ್ಷ ಬಿಜೆಪಿ ವಿಪಕ್ಷಗಳ ವಿರುದ್ಧ ಇಲ್ಲ. ಈಗ ಜನರ ವಿರುದ್ಧ ಹೋಗಿದೆ. ಗುಜರಾತನಲ್ಲಿ ಆಪ್ ಮುಖಂಡ ಸಿಸೋಡಿಯಾ ಮನೆಯಲ್ಲಿ ಇಡಿ ದಾಳಿ ನಡೆಸಿದರು.ಅಲ್ಲಿ ಏನೂ ಸಿಕ್ಕಿತ್ತು ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದು ಸವಾಲ್ ಹಾಕಿದರು.
ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಶಂಕರ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.