ಶಿರ (ತುಮಕೂರು): ಬಿಜೆಪಿಯ ರಾಷ್ಟ್ರನಾಯಕರು ನನ್ನನ್ನು 2018 ರ ವಿಧಾನಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಮಾಡಲು ಮುಂದಾಗಿದ್ದರು ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಶಿರಾದಲ್ಲಿ ಬುಧವಾರ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ‘ಕೇಂದ್ರದಿಂದ ನರೇಂದ್ರ ಮೋದಿ ಅವರೇ ಆಫರ್ ನೀಡಿದ್ದರು. ಐದು ವರ್ಷ ಯಾರೂ ನಿಮಗೆ ತೊಂದರೆ ಕೊಡೊಲ್ಲ ಎಂದಿದ್ದರು. ಆದರೆ ಅಲ್ಲಿನ ವಾತಾವರಣ ನನಗೆ ಒಗ್ಗದ ಕಾರಣ ನಾನು ಅವರ ಆಫರ್ ಅನ್ನು ಒಪ್ಪಲಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಯಾದರೇ ರೈತರ ಸಮಸ್ಯೆಗಳಿಗೆ ಸ್ಪಂದಿಸಬಹುದು, ಅವರ ಆಶೋತ್ತರಗಳನ್ನು ಈಡೇರಿಸಬಹುದು ಎಂಬ ಕಾರಣದಿಂದ ನಾನು ಸಿಎಂ ಪದವಿಗೆ ಒಪ್ಪಿಕೊಂಡೆ, ಆದರೆ ಸಂಕುಚಿತ ಮನಸ್ಸಿನ ನಾಯಕರಿಂದಾಗಿ ನಾನು ಸರಿಯಾಗಿ ಸರ್ಕಾರ ನಡೆಸಲು ಸಾಧ್ಯವಾಗಲಿಲ್ಲ ಎಂದು ಕಾರ್ಯಕರ್ತರ ಮುಂದೆ ತಮ್ಮ ಬೇಸರ ವ್ಯಕ್ತ ಪಡಿಸಿದರು.
ಇನ್ನು ಕಳೆದ ವಿಧಾನಸಭೆ ಫಲಿತಾಂಶ ನೋಡಿ ರಾಜಕೀಯದಿಂದ ನಿರ್ಗಮಿಸಬೇಕು ಎಂದುಕೊಂಡೆ. ಆದರೆ ಕಾಂಗ್ರೆಸ್ನವರು ತರಾತುರಿಯಲ್ಲಿ ದೇವೇಗೌಡರಿಗೆ ಫೋನ್ ಮಾಡಿ ಕರೆದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡುವಂತೆ ದೊಡ್ಡಗೌಡರು ಒತ್ತಾಯ ಮಾಡಿದ್ದರು, ಎಷ್ಟೇ ಹೇಳಿದರೂ ಕೇಳದೆ ನನಗೆ ಕಾಂಗ್ರೆಸ್ನವರು ಮುಖ್ಯಮಂತ್ರಿ ಪಟ್ಟ ಕಟ್ಟಿದ್ರು. ನನಗೆ ಸಿಎಂ ಆಗುವ ಆಸೆ ಇರಲಿಲ್ಲ’ ಎಂದು ಅಂದು ನಡೆದ ರಾಜಕೀಯ ಬೆಳವಣಿಗೆಯನ್ನು ಪಕ್ಷದ ಕಾರ್ಯಕರ್ತರಿಗೆ ವಿವರಿಸಿದರು.
ಯಡಿಯೂರಪ್ಪ ಸರ್ಕಾರ ಹಲವು ಜನಪರ ಯೋಜನೆಗಳನ್ನು ಕೈಬಿಟ್ಟಿದೆ ಎಂದು ಆರೋಪಿಸಿದ ಕುಮಾರಸ್ವಾಮಿ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಹರಿಹಾಯ್ದರು, ಹಣದ ಆಮೀಷಕ್ಕೆ ಬಲಿಯಾಗದಂತೆ ಮತದಾರರಿಗೆ ಮನವಿ ಮಾಡಿದರು. ಇನ್ನೂ ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಸೇರಿ ಪಕ್ಷದ ಹಲವಾರು ನಾಯಕರು ಸಭೆಯಲ್ಲಿ ಇದ್ದರು.