BMTC: ನಿರ್ವಾಹಕ ಹುದ್ದೆಗೆ 371-ಜೆ ಅಡಿ ನೇಮಕಗೊಂಡ 212 ಅಭ್ಯರ್ಥಿಗಳಿಗೆ ಆದೇಶ ಪತ್ರ ವಿತರಿಸಿದ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2,500 ನಿರ್ವಾಹಕ ಹುದ್ದೆಯ ನೇಮಕಾತಿ ಸಂಬಂಧ 371-ಜೆ (ಕಲ್ಯಾಣ ಕರ್ನಾಟಕ) ಮೀಸಲಾತಿಯಡಿ 212 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅವರೆಲ್ಲರಿಗೂ ಶನಿವಾರ ಆದೇಶ ಪತ್ರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿತರಿಸಿದ್ದಾರೆ.
ನಗರದ ಬಿಟಿಎಂ ಬಡಾವಣೆಯಲ್ಲಿರುವ ತಮ್ಮ ಶಾಸಕರ ಕಚೇರಿಯಲ್ಲಿ 212 ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ಪ್ರತಿಯನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಬಿಎಂಟಿಸಿ ಸಂಸ್ಥೆಯಿಂದ ಫೆಬ್ರವರಿ ತಿಂಗಳ ಶೇ.3.75 ತುಟ್ಟಿ ಭತ್ಯೆಯ ಹಿಂಬಾಕಿ ಮೊತ್ತವನ್ನು ಎಲ್ಲ ವರ್ಗದ ಅಧಿಕಾರಿ/ಸಿಬ್ಬಂದಿಗೆ ನವೆಂಬರ್ ತಿಂಗಳ ವೇತನದೊಂದಿಗೆ ಸೇರಿಸಿ ಪಾವತಿ ಮಾಡಲಾಗಿದೆ. ಈ ಅವಧಿಯಲ್ಲಿ ನಿವೃತ್ತಿಗೊಂಡಿರುವ ಅರ್ಹ ನೌಕರರಿಗೂ ಸಹ ತುಟ್ಟಿ ಭತ್ಯೆ ಹಿಂಬಾಕಿಯನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್, ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕ ಅಬ್ದುಲ್ ಅಹದ್, ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಎಂ.ಶಿಲ್ಪಾ ಹಾಗೂ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.