
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿತರಿಸುವ ಟಿಕೆಟ್‌ನ ಇಟಿಎಂ ರೋಲ್‌ಗಳ ಬಳಕೆ ಬಗ್ಗೆ ಮಾರ್ಗಸೂಚಿ ಅಳವಡಿಸಿಕೊಳ್ಳುವಂತೆ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಈ ಸಂಬಂಧ ಮಾ.14ರಂದು ಸಂಸ್ಥೆಯ ಸಂಚಾರ ಆಚರಣೆ ಶಾಖೆಯಿಂದ ಆದೇಶ ಹೊರಡಿಸಲಾಗಿದೆ. ಸಂಸ್ಥೆಯಲ್ಲಿ ಸಾರಿಗೆಗಳ ಸುಗಮ ಕಾರ್ಯಾಚರಣೆಯಲ್ಲಿ ದಕ್ಷತೆ, ನಿಯಮಿತತೆ ತರುವ ಉದ್ದೇಶದಿಂದ ಹಾಗೂ ಸುಲಭ ಮೇಲ್ವಿಚಾರಣೆ ಹಿತದೃಷ್ಟಿಯಿಂದ ಚತುರ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅದರ ಒಂದು ಭಾಗವಾಗಿ ಸಂಸ್ಥೆಯ ಎಲ್ಲ ಸಾರಿಗೆಗಳಲ್ಲಿ ಇಟಿಎಂ ಯಂತ್ರದ ಮೂಲಕ ಪ್ರಯಾಣಿಕರ ಟಿಕೆಟ್ ಹಾಗೂ ದೈನಂದಿನ ಪಾಸುಗಳನ್ನು ವಿತರಿಸಲಾಗುತ್ತಿದೆ.
ಈ ನಡುವೆ ಘಟಕಗಳಲ್ಲಿ ಇಟಿಎಂ ರೋಲ್‌ಗಳ ಬಳಕೆ ಬಗ್ಗೆ ಕೆಳಕಂಡಂತೆ ಅಗತ್ಯ ಕ್ರಮ ವಹಿಸಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. 1.ಘಟಕ ವ್ಯವಸ್ಥಾಪಕರು/ ಲೆಕ್ಕ ಪತ್ರ ಮೇಲ್ವಿಚಾರಕರು ಪ್ರತಿದಿನ ಕಾರ್ಯಾಚರಣೆಗೆ ಅಗತ್ಯವಿರುವ ಇಟಿಎಂ ರೋಲ್‌ಗಳ ದಾಸ್ತಾನು ಲಭ್ಯತೆ ಬಗ್ಗೆ ಖಚಿತಪಡಿಸಿಕೊಳ್ಳುವುದು.
ಲೆಕ್ಕಪತ್ರ ಮೇಲ್ವಿಚಾರಕರು/ ಉಗ್ರಾಣ ರಕ್ಷಕರು/ ಸಹಾಯಕ ಲೆಕ್ಕಿಗರು/ ಕಿರಿಯ ಸಹಾಯಕರು ಕನಿಷ್ಠ ಟಿಕೆಟ್ ರೋಲ್‌ಗಳ ದಾಸ್ತಾನು ಮಟ್ಟವನ್ನು ನಿರ್ವಹಣೆ ಮಾಡುವುದು ಹಾಗೂ ಪೂರೈಕೆಯಾದ ಟಿಕೆಟ್ ರೋಲ್‌ಗಳ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುವುದು.
ಟಿಕೇಟ್ ರೋಲ್ ಅಳತೆ ಮತ್ತು ಅಂದಾಜು ಟಿಕೆಟ್ ಲಭ್ಯತೆ ವಿವರ: ಒಂದು ರೋಲ್‌ನ ಸರಾಸರಿ ಉದ್ದ-15 ಮೀ. ಒಂದು ಟಿಕೆಟ್ ಉದ್ದ-8.5 ಸೆ.ಮೀ.
ಸರಾಸರಿ ಒಂದು ರೋಲ್‌ನಲ್ಲಿ ಅಂದಾಜು 175 ಟಿಕೆಟ್‌ಗಳನ್ನು ಮುದ್ರಿಸಬಹುದು ಆದ್ದರಿಂದ ಈಗಾಗಲೇ ಫೆಬ್ರವರಿಯಲ್ಲೇ ತಿಳಿಸಿರುವಂತೆ “ಟಿಕೆಟ್ ರೋಲ್‌ಗಳನ್ನು ಅನುಸೂಚಿಗಳ ಪಾಳಿಗನುಗುಣವಾಗಿ (Schedules Shiftwise), ಅಂದರೆ ಅನುಸೂಚಿಗಳಲ್ಲಿ ಈಗಾಗಲೇ ಮಾರಾಟವಾಗುತ್ತಿರುವ ಟಿಕೆಟ್‌ಗಳಿಗೆ ಅನುಗುಣವಾಗಿ ಲೆಕ್ಕಾಚಾರ ಮಾಡಿ (ಶೇ.10 ರಷ್ಟು ಮಾತ್ರ ಹೆಚ್ಚಾಗಿ) ನಿರ್ವಾಹಕರಿಗೆ ನೀಡುವುದು.
ಘಟಕಗಳಲ್ಲಿ ಅನುಸೂಚಿವಾರು ವಿತರಣೆಯಾದ ಟಿಕೆಟ್‌ಗಳ ಮಾಹಿತಿ ಲಭ್ಯವಾಗುವಂತೆ ಚತುರ ಸಾರಿಗೆ ವ್ಯವಸ್ಥೆ (ITS) ಶಾಖೆಯಿಂದ ಕ್ರಮ ವಹಿಸುವುದು.
ನಿರ್ವಾಹಕರಿಗೆ ನೀಡಿದ, ಬಳಕೆಯಾದ ಮತ್ತು ಹಿಂದಿರುಗಿಸಿದ ಟಿಕೆಟ್ ರೋಲ್‌ಗಳ ಮಾಹಿತಿಯನ್ನು ರಿಜಿಸ್ಟರ್‌ನಲ್ಲಿ ದಾಖಲಿಸುವುದು. ಪ್ರತಿದಿನ ಲೆಕ್ಕಪತ್ರ ಮೇಲ್ವಿಚಾರಕರು, ಉಗ್ರಾಣ ರಕ್ಷಕರು ಹಾಗೂ ವಿಷಯ ನಿರ್ವಾಹಕರು ರಿಜಿಸ್ಟರ್ ಪರಿಶೀಲಿಸಿ, ಸಹಿ ಮಾಡುವುದು.
ನಿರ್ವಾಹಕರು ಟಿಕೆಟ್ ರೋಲ್‌ಗಳನ್ನು ರಿಜಿಸ್ಟರ್‌ನಲ್ಲಿ ಸಹಿ ಮಾಡಿ ಪಡೆಯುವುದು. 7. ಸಂಪೂರ್ಣವಾಗಿ ಬಳಕೆಯಾದ ಇಟಿಎಂ ರೋಲ್‌ಗಳ Plastic Empty Cap ಗಳನ್ನು ಮತ್ತು ಬಳಕೆಯಾಗದ ಪೂರ್ಣ ರೋಲ್‌ಗಳಿದ್ದಲ್ಲಿ ಘಟಕದ ಚೀಟಿ ಶಾಖೆಗೆ ಕಡ್ಡಾಯವಾಗಿ ಹಿಂದಿರುಗಿಸುವುದು.
ಘಟಕಗಳಲ್ಲಿ ನಿರ್ವಾಹಕರಿಂದ ಹಿಂಪಡೆದ ಇಟಿಎಂ ರೋಲ್‌ಗಳ Plastic Empty Cap ಗಳನ್ನು ಪ್ರತಿ ಮಾಹೆ ಕೇಂದ್ರ ಉಗ್ರಾಣಕ್ಕೆ ಹಿಂದಿರುಗಿಸುವುದು. 9. ಬಳಕೆಯಾದ ಟಿಕೆಟ್ ರೋಲ್‌ಗಳನ್ನು ಕೇಂದ್ರ ಉಗ್ರಾಣಕ್ಕೆ ಹಿಂದಿರುಗಿಸಿರುವ ಹಾಗೂ ಬಳಕೆಯಾಗಿರುವ ರೋಲ್ ಸರಿಯಾಗಿರುವ ಬಗ್ಗೆ ಘಟಕ ವ್ಯವಸ್ಥಾಪಕರು ಪರಿಶೀಲಿಸಿ ದೃಢೀಕರಿಸುವುದು.
ಈ ಸುತ್ತೋಲೆಯು ತಕ್ಷಣದಿಂದ ಜಾರಿಗೆ ಬರುತ್ತದೆ. ಮೇಲಿನ ಎಲ್ಲ ಅಂಶಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಕುರಿತು ಅನುಸರಣಾ ವರದಿ ಸಲ್ಲಿಸಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹೊರಡಿಸುವ ಆದೇಶವನ್ನು ಎಲ್ಲರೂ ತಪ್ಪದೆ ಪಾಲಿಸ ಬೇಕು ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು(ಕಾ) ಸೂಚನೆ ನೀಡಿದ್ದಾರೆ.