BMTC: ವಜಾಗೊಂಡ ನೌಕರರ ಮರು ನೇಮಕಕ್ಕೆ ಮೂರು ಷರತ್ತುಗಳು ಅನ್ವಯ – ಇಂದು ನಿಗಮದಿಂದ ಜಂಟಿ ಮೆಮೋ ಬಿಡುಗಡೆ
ಬೆಂಗಳೂರು: ಕಳೆದ 2021ರ ಏಪ್ರಿಲ್ 7 ರಿಂದ 21ರವರೆಗೆ ಸಂಸ್ಥೆಯ ವಿರುದ್ಧ ನೌಕರರು ಕೈಗೊಂಡ ಮುಷ್ಕರದ ವೇಳೆ ಸೇವೆಯಿಂದ ವಜಾಗೊಂಡಿರುವ ಉಳಿದ ನೌಕರರನ್ನು ಮತ್ತೆ ಲೋಕಾದಲತ್ ಮೂಲಕ ಮರು ನೇಮಕ ಮಾಡಿಕೊಳ್ಳಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇಂದು (ಜ.5) ಈ ಹಿಂದೆ ಇದ್ದ ಷರತ್ತುಗಳಲ್ಲಿ ಕೆಲವು ಮಾರ್ಪಾಡು ಮಾಡಿ ಜಂಟಿ ಮೆಮೋವನ್ನು ಬಿಡುಗಡೆ ಮಾಡಿದೆ.
1) ವಜಾಗೊಂಡಿರುವ ನೌಕರರ ಮರು ನೇಮಕ ಮಾಡಿಕೊಳ್ಳಲಾಗುವುದು. ಮರು ನೇಮಕಗೊಂಡ ನೌಕರರು ನಿರಂತರ ಸೇವೆಗೆ ಅರ್ಹರಿರುತ್ತಾರೆ. ಆದರೆ ಈ ಹಿಂದಿನ ಅಂದರೆ ವಜಾಗೊಂಡಿರುವ ಅವಧಿಯಲ್ಲಿ ಮಧ್ಯಂತರ ಪರಿಹಾರ ಸೇರಿದಂತೆ ವಜಾಗೊಂಡ ದಿನಾಂಕದಿಂದ ಮರು ನೇಮಕಗೊಳ್ಳುವ ದಿನಾಂಕದವರೆಗೆ ಯಾವುದೇ ಹಿಂಬಾಕಿ ವೇತನ, ತತ್ಪಲಿತ ಸೇವಾ ಸೌಲಭ್ಯ ರಹಿತವಾಗಿ ಮರು ನೇಮಕ ಮಾಡಿಕೊಳ್ಳಲಾಗುವುದು.
2)ಮೂರು ವರ್ಷಗಳ ಅವಧಿಗೆ ಸಂಚಿತ ಪರಿಣಾಮವಿಲ್ಲದೆ ಒಂದು ವಾರ್ಷಿಕ ವೇತನ ಹೆಚ್ಚಳವನ್ನು ಮುಂದೂಡಲು ಒಪ್ಪಿಕೊಂಡಿದ್ದಾರೆ.
3) ಮುಂದೆ ಯಾವುದೇ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ. ಇತರರನ್ನು ಪ್ರಚೋದಿಸುವುದಿಲ್ಲ ಹಾಗೂ ಮುಷ್ಕರದ ಅವಧಿಯಲ್ಲಿ ಗೈರು ಹಾಜರಿಯಾಗುವುದಿಲ್ಲ ಎಂದು ನೌಕರರು ಮುಚ್ಚಳಕೆ ಸಲ್ಲಸುವುದು ಇಂದು ಬಿಡುಗಡೆ ಮಾಡಿರುವ ಜಂಟಿ ಮೆಮೋದಲ್ಲಿ ಇರುವ ಷರತ್ತುಗಳು.
ಈ ಮೂರು ಷರತ್ತುಗಳನ್ನು ಒಪ್ಪಿಕೊಂಡು ವಜಾಗೊಂಡ ನೌಕರರು ಜಂಟಿ ಮೆಮೋಗೆ ಸಹಿ ಮಾಡುವ ಮೂಲಕ ಮತ್ತೆ ಕರ್ತವ್ಯಕ್ಕೆ ಹಾಜರಾಗಬಹುದಾಗಿ. ಈ ಸಂಬಂಧ ಈ ಹಿಂದೆ ಜಂಟಿ ಮೆಮೋ ಒಪ್ಪದೆ ಮರು ನೇಮಕದಿಂದ ಹಿಂದೆ ಸರಿದಿರುವ ಸುಮಾರು 482 ಮಂದಿ ನೌಕರರು ಇಂದು ಹೊಸದಾಗಿ ಬಿಡುಗಡೆ ಮಾಡಿರುವ ಜಂಟಿ ಮೆಮೋ ಒಪ್ಪಿಕೊಂಡರೆ ನಾಳೆಯಿಂದಲೇ ಡ್ಯೂಟಿಗೆ ಹೋಗಬಹುದಾಗಿದೆಯಂತೆ.
ಮರು ನೇಮಕಗೊಂಡ ಕಾಯಂ ನೌಕರರು ಮುಂಬಡ್ತಿಗೆ ಅರ್ಹರು – ಜಂಟಿ ಮೆಮೋದಲ್ಲಿ ವಿಧಿಸಿದ್ದ ಷರತ್ತು ಹಿಂಪಡೆದ BMTC