CRIMENEWSಬೆಂಗಳೂರು

BMTC: ಮಾರ್ಗ ಮಧ್ಯೆ ಬಸ್‌ ನಿಲ್ಲಿಸಲಿಲ್ಲ ಅಂತ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಮಹಿಳೆ- ಎಫ್‌ಐಆರ್‌ ದಾಖಲು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮಾರ್ಗಮಧ್ಯೆ  ಕೇಳಿದ ಸ್ಥಳದಲ್ಲಿ ಬಸ್‌ ನಿಲ್ಲಿಸಲಿಲ್ಲ ಎಂದು ಪ್ರಯಾಣಿಕ ಮಹಿಳೆಯೊಬ್ಬರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ಕೈಕೊಂಡನಹಳ್ಳಿ ಬಸ್ ನಿಲ್ದಾಣ ಸಮೀಪ ಇಂದು ಬೆಳಗ್ಗೆ ನಡೆದಿದೆ.

ಬಿಎಂಟಿಸಿ 38 ನೇ ಘಟಕದ ಚಾಲಕ ಅತಹರ ಹುಸೇನ್ ಮಹಿಳೆಯಿಂದ ಹಲ್ಲೆಗೊಳಗಾದವರು. ಈ ಸಂಬಂಧ ಬೆಳಂದೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಘಟನೆ ವಿವರ- ದೂರು: ಬಿಎಂಟಿಸಿ 38 ನೇ ಘಟಕದ ಚಾಲಕ ಅತಹರ ಹುಸೇನ್ ಆದ ನಾನು ಬಿಎಂಟಿಸಿ ಸಂಸ್ಥೆಯಲ್ಲಿ ಚಾಲಕನಾಗಿದ್ದೇನೆ. ಅದರಂತೆ   ಇವತ್ತಿನ ದಿನ ಅಂದರೆ ಜೂ.11 ರಂದು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ಬಸ್ (KA57 F0836) ಚಾಲಕರಾಗಿ ನಿರ್ವಾಹಕ (CONDUCTOR) ಮುರಳಿ ಮೋಹನ್ ಅವರ ಜತೆಗೆ ಟಿನ್ ಫ್ಯಾಕ್ಟರಿ- ವಿಪ್ರೋಗೆಟ್- ಎಲೆಕ್ಟ್ರಾನಿಕ್ ಸಿಟಿ ಮಾರ್ಗಾಚರಣೆಯಲ್ಲಿದ್ದೆವು.

ಹೀಗಿರುವಾ ಬೆಳಗ್ಗೆ ಸುಮಾರು 8:40ರ ಸಮಯದಲ್ಲಿ ಕೈಕೊಂಡನಹಳ್ಳಿ ಬಸ್ ನಿಲ್ದಾಣದ ಹತ್ತಿರ ಮಹಿಳಾ ಪ್ರಯಾಣಿಕರಾದ ಕಾವ್ಯ ಎಂಬುವರು ಟಿಕೆಟ್ ತೆಗೆದುಕೊಂಡಿರುವ ಸ್ಥಳದಲ್ಲಿ ಇಳಿಯದೇ, ಚಾಲನೆಯಲ್ಲಿದ್ದ ಬಸನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಇಳಿಯುತ್ತೇನೆ ಎಂದು ಹೇಳಿದ್ದರು.

ಅದಕ್ಕೆ ನಾನು ಟ್ರಾಫಿಕ್ ಬಹಳ ಇದೆ ಮುಂದಿನ ಬಸ್ ಸ್ಟಾಪ್‌ನಲ್ಲಿ ಇಳಿಸುತ್ತೇನೆ ಎಂದು ಹೇಳಿದೆ. ಆಗ ಕಾವ್ಯ ಅವರು ಏಕಾಏಕಿ ಬಸ್ ನಿಲ್ಲಿಸಲೇ ಬೋಳಿ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು ಚಪ್ಪಲಿಯಿಂದ ಹೊಡೆದು ಅವಮಾನಗೊಳಿಸಿದ್ದಾರೆ.

ಅಲ್ಲದೆ ರಸ್ತೆ ಮಧ್ಯದಲ್ಲಿ ಬಸನ್ನು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಾಡಿ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ವೇಳೆ ತನಗೆ ದೊಡ್ಡ ದೊಡ್ಡವರೆಲ್ಲ ಗೊತ್ತು ನಿಮಗೆ ಏನು ಮಾಡಿಸುತ್ತೇನೆ ನೋಡಿ ಎಂದು ಬೆದರಿಕೆ ಹಾಕಿದ್ದಾರೆ.

ಅವಾಚ್ಯ ಶಬ್ದಗಳಿಂದ ಬೈದು, ಚಪ್ಪಲಿಯಿಂದ ಹೊಡೆದು, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಪ್ರಯಾಣಿಕ ಮಹಿಳೆ ಕಾವ್ಯ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಚಾಲಕ ಅತಹರ ಹುಸೇನ್  ಬೆಂಳಂದೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

Megha
the authorMegha

Leave a Reply

error: Content is protected !!