ಶಿರಾ: ಲಾರಿಯ ಹಿಂಬದಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಚಾಲಕ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪಘಾತ ಸಂಭವಿಸಿದ್ದು, ಈ ವೇಳೆ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯ ಉಮೇಶ್ ನಾಗಪ್ಪ ಹಾಗೂ ಸಂತೋಷ್ ಸುರೇಶ್ ಎಂಬುವರು ಸಾವನ್ನಪ್ಪಿದ್ದಾರೆ.
ಮುಂದೆ ಸಾಗುತ್ತಿದ್ದ ಲಾರಿಗೆ, ಹಿಂಬದಿಯಿಂದ ಬೊಲೆರೋ ಡಿಕ್ಕಿಯಾಗಿದೆ. ಪರಿಣಾಮ ಬೊಲೆರೋದಲ್ಲಿದ್ದ ಇಬ್ಬರು ಅಸುನೀಗಿದ್ದಾರೆ. ಇನ್ನು ಚಾಲಕನಿಗೆ ಗಾಯವಾಗಿದ್ದು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ದ್ರಾಕ್ಷಿ ತುಂಬಿಕೊಂಡು ಬೆಂಗಳೂರು ಕಡೆ ಬರುವಾಗ ಅಪಘಾತ ಸಂಭವಿಸಿದೆ. ಅಪಘಾತ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.