ಬೆಂಗಳೂರು: ಈ ಮನೆಯಲ್ಲಿ ಒಂದು ಸಾವು ಆಗಿದೆ. ಇನ್ನು ಮೂರು ಸಾವುಗಳು ಆಗುತ್ತವೆ ಎಂದು ನಸುಕಿನಲ್ಲಿ ಸಾರಿಕೊಂಡು ಹೋದ ಬುಡಬುಡಕೆ, ಬೆಳಗ್ಗೆ ಮತ್ತೆ ಅದೇ ಜಾಗಕ್ಕೆ ಬಂದು ಆ ಮನೆಯವರಿಗೆ ಭಯ ಹುಟ್ಟಿಸಿ ಪೂಜೆ ನೆಪದಲ್ಲಿ ವಂಚಿಸಿದ್ದ, ಆ ವಂಚಕ ಇದೀಗ ಜ್ಞಾನಭಾರತಿ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.
ಮಾಗಡಿ ರಸ್ತೆ ಹೆಗ್ಗನಹಳ್ಳಿ ಕ್ರಾಸ್ ನಿವಾಸಿ ಆನಂದ ಅಲಿಯಾಸ್ ಬುಡಬುಡುಕೆ ಕೃಷ್ಣಪ್ಪ (36) ಬಂಧಿತ. ಪೂರ್ವಜರಿಂದ ಬುಡಬುಡುಕೆ ವೃತ್ತಿ ಮಾಡುತ್ತಿದ್ದ ಆನಂದ, ಎಲ್ಲೆಡೆ ಸುತ್ತಾಡುತ್ತಿದ್ದ. ಸಾವಿನ ಮನೆಯಲ್ಲಿ ಭಯ ಹುಟ್ಟಿಸಿ ಪೂಜೆ ನೆಪದಲ್ಲಿ ಹಣ, ಆಭರಣ ದೋಚಿದ್ದ ಬುಡಬುಡಿಕೆಯವನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ಹಾಕಿದ್ದಾರೆ.
ಜ್ಞಾನಭಾರತಿ 2ನೇ ಹಂತದ ಕೆಪಿಎಸ್‌ಸಿ ಲೇಔಟ್ ನಿವಾಸಿ ಕೇಂದ್ರ ಸರ್ಕಾರಿ ನೌಕರ ವರದರಾಜು ಅವರ ತಂದೆ ಆ.13ರಂದು ನಿಧನರಾಗಿದ್ದರು. ಸಂಪ್ರದಾಯದಂತೆ ಮನೆ ಎದುರು ಕುಟುಂಬಸ್ಥರು ದೀಪ ಹಚ್ಚಿದ್ದರು. ಮರುದಿನ ಬೆಳಗಿನ ಜಾವ 4 ಗಂಟೆಗೆ ಬುಡಬುಡಿಕೆ ಆನಂದ್, ಇದನ್ನು ಗಮನಿಸಿದ್ದ. ವರದರಾಜು ಮನೆ ಬಳಿ ಬಂದು ‘ಈ ಮನೆಯಲ್ಲಿ ಒಂದು ಸಾವು ಆಗಿದೆ. ಇನ್ನು ಮೂರು ಸಾವುಗಳು ಆಗುತ್ತವೆ’ ಎಂದು ಸಾರಿಕೊಂಡು ಹೋಗಿದ್ದ.
ಬಳಿಕ ಬೆಳಗ್ಗೆ 9.30ಕ್ಕೆ ಆ ಮನೆ ಬಳಿ ಬಂದ ಆನಂದ, ವರದರಾಜು ಪತ್ನಿ ಒಬ್ಬರೇ ಇರುವುದನ್ನು ಗಮನಿಸಿ ವಿಷಯ ಪ್ರಸ್ತಾಪ ಮಾಡಿ ಭಯ ಪಡಿಸಿದ್ದ. ಈ ಸಾವುಗಳನ್ನು ತಪ್ಪಿಸಲು ಒಂದು ಪೂಜೆ ಮಾಡಿಸಬೇಕು. ಅದಕ್ಕೆ 5 ಸಾವಿರ ರೂ. ಖರ್ಚಾಗಲಿದೆ ಎಂದಿದ್ದ. ಅದನ್ನು ನಂಬಿದ ವರದರಾಜು ಪತ್ನಿ ಪೂಜೆ ಮಾಡಿಸಲು ಒಪ್ಪಿ ಚಿನ್ನಾಭರಣ ಮತ್ತು ನಗದು ನೀಡಿದ್ದರು. ಆ.14ರ ಮಧ್ಯಾಹ್ನ 12 ಗಂಟೆಗೆ ಪೂಜೆ ಮಾಡಿ ಬಳಿಕ ಒಡವೆಗಳನ್ನು ವಾಪಸ್ ಕೊಡುವುದಾಗಿ ಹೇಳಿ ಮೊಬೈಲ್ ನಂಬರ್ ಕೊಟ್ಟು ಪರಾರಿಯಾಗಿದ್ದ.
ಆದರೆ, 12 ಗಂಟೆ ಆದರೂ ಆತ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ವರದರಾಜು ದೂರು ನೀಡಿದ್ದರು. ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಬಿ.ಎಸ್. ಮಂಜುನಾಥ್ ನೇತೃತ್ವದ ತಂಡ, ಬುಡಬುಡಕೆ ಜನ ಎಲ್ಲಿ ಹೆಚ್ಚು ವಾಸ ಆಗಿದ್ದಾರೆ ಎಂದು ಸುತ್ತಮುತ್ತಲ ಪ್ರದೇಶದಲ್ಲಿ ಮಾಹಿತಿ ಕಲೆ ಹಾಕಿದಾಗ ಹೆಗ್ಗನಹಳ್ಳಿ ಕ್ರಾಸ್ ನೀಲಗಿರಿ ತೋಪು ಬಳಿ ಇರುವ ಮಾಹಿತಿ ಲಭ್ಯವಾಗಿತ್ತು.
ಅದರಲ್ಲಿ ಹೆಚ್ಚು ಸಕ್ರಿಯ ಆಗಿರುವ ವ್ಯಕ್ತಿ ಯಾರೆಂದು ತಿಳಿದು ಆತನ ಫೋಟೋ ಮತ್ತು ಮೊಬೈಲ್ ನಂಬರ್ ಪಡೆದು ಪರಿಶೀಲನೆ ನಡೆಸಿದಾಗ ಆ.13ರಂದು ಆರೋಪಿ ಆನಂದ್, ವರದರಾಜುವಿನ ಮನೆ ಸಮೀಪ ಬಂದಿರುವ ಬಗ್ಗೆ ಮೊಬೈಲ್ ಸಿಗ್ನಲ್ ಲಭ್ಯವಾಗಿದೆ. ಜತೆಗೆ ದೂರುದಾರರ ಪತ್ನಿ ಆರೋಪಿಯ ಮುಖಚಹರೆ ಗುರುತಿಸಿದರು. ಇದರ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೋಪ್ಪಿಕೊಂಡಿದ್ದಾನೆ. 2 ಲಕ್ಷ ರೂ. ಮೌಲ್ಯದ 50 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.