ಬೆಂಗಳೂರು: ಮುಸ್ಲಿಮರಿಗೆ 2ಬಿ ಕೆಟಗರಿಯಲ್ಲಿ ನೀಡಲಾಗುತ್ತಿದ್ದ 4% ಮೀಸಲಾತಿಯನ್ನು ರದ್ದುಪಡಿಸಿದ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಾರ್ಟಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫರೀದುದ್ದೀನ್ ಷರೀಫ್ ಖಂಡಿಸಿದ್ದಾರೆ.
ಮಾಧ್ಯಮಗಳಿಗೆ ಇಂದು ಹೇಳಿಕೆ ನೀಡಿರುವ ಷರೀಫ್, ಮುಸ್ಲಿಮರಿಗಿದ್ದ 2ಬಿ ಮೀಸಲಾತಿಯನ್ನು ಯಾರೂ ಕೂಡ ಪ್ರಶ್ನಿಸಿರಲಿಲ್ಲ. ಇದನ್ನು ರದ್ದು ಪಡಿಸಬೇಕೆಂದು ನ್ಯಾಯಾಲಯದ ಆದೇಶ ಕೂಡ ಇಲ್ಲ. ಆದರೂ ರಾಜ್ಯ ಬಿಜೆಪಿ ಸರ್ಕಾರವು ಯಾವುದೇ ಮುನ್ಸೂಚನೇ ನೀಡದೇ, ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಮೀಸಲಾತಿ ರದ್ದು ನಿರ್ಣಯವನ್ನು ಘೋಷಿಸಿದೆ ಎಂದು ಕಿಡಿಕಾರಿದರು.
ಇನ್ನು ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಸ್ಲಿಮರನ್ನು ಕೆರಳಿಸಿ ಕೋಮುಗಲಭೆ ಸೃಷ್ಟಿಸಲು ಹುನ್ನಾರ ನಡೆಸಿರುವುದು ಕಂಡುಬರುತ್ತಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಸ್ಲಿಂ ಸಮುದಾಯ ಹಿಂದುಳಿದೆ. ಅಲ್ಪಸಂಖ್ಯಾತ ಸಮುದಾಯವೆಂಬ ಕಾರಣಕ್ಕೆ ಮುಸ್ಲಿಮರ ಮೇಲೆ ಶೋಷಣೆ ಮಾಡುತ್ತಿರುವ ಘಟನೆಗಳನ್ನು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮೀಸಲಾತಿ ರದ್ದು ಪಡಿಸಿರುವುದು ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ ಎಂದು ಹೇಳಿದರು.
ಇನ್ನು ಮೀಸಲಾತಿ ಪಡೆಯುವುದು ಮುಸ್ಲಿಮರ ಸಾಂವಿಧಾನಿಕ ಹಕ್ಕಾಗಿದ್ದು, ಇಡಬ್ಲ್ಯುಎಸ್ ಬದಲು 2ಬಿ ಕೆಟಗರಿಯನ್ನು ಮುಂದುವರಿಸಬೇಕು. ಈ ಕುರಿತು ರಾಜ್ಯಪಾಲರಿಗೂ ದೂರು ನೀಡಿ, ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಲು ನಿರ್ಧರಿಸಿದ್ದೇವೆ ಎಂದು ಷರೀಫ್ ಹೇಳಿದರು.