NEWSಸಂಸ್ಕೃತಿ

ಸಂಭ್ರಮದ 517ನೇ ಕೆಂಪೇಗೌಡ ಜಯಂತಿ: ನಾಡಪ್ರಭುವಿಗೆ ನಮಿಸಿದ ಸಿಎಂ ಶಿವಕುಮಾರ್

28 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೊಂದು ವರ್ಷ ಕಾರ್ಯಕ್ರಮ: ಮುಖ್ಯಮಂತ್ರಿ ಘೋಷಣೆ. ದೂರದೃಷ್ಟಿಯ ಮಹಾನ್ ಚೇತನ ಕೆಂಪೇಗೌಡರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: “ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ವಿಧಾನಸೌಧ ಹೊರತಾಗಿಯೂ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ 28 ವರ್ಷಗಳ ಕಾಲ ಒಂದೊಂದು ಕ್ಷೇತ್ರದಲ್ಲಿ ರಾಜ್ಯಮಟ್ಟದ ಆಚರಣೆ ಮಾಡಲು ತೀರ್ಮಾನಿಸಲಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.

ಬೆಂಗಳೂರು ನಿರ್ಮಾತೃ, ಸರ್ವ ಜನಾಂಗದ ನಾಯಕ, ಬೆಂದಕಾಳೂರು ಕಟ್ಟಿದ ದೂರದೃಷ್ಟಿಯ ನಾಯಕ ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಬೃಹತ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ 517 ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಪ್ರತಿಮೆಯ ಪಕ್ಕದಲ್ಲಿ ನಿರ್ಮಾಣ‌ ಮಾಡಿರುವ ‘ಥೀಮ್ ಪಾರ್ಕ್’ ವೀಕ್ಷಿಸಿ ಮಾತನಾಡಿದರು.

ಇಂದು ಯಶವಂತಪುರದಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದು, ಮುಂದಿನ ವರ್ಷ ಶಾಸಕರೊಂದಿಗೆ ಚರ್ಚಿಸಿ ಬ್ಯಾಟರಾಯನಪುರ, ಯಲಹಂಕ, ಕೆ.ಆರ್ ಪುರ ಅಥವಾ ಬೇರೆ ಕ್ಷೇತ್ರಗಳಲ್ಲಿ ಕೆಂಪೇಗೌಡರ ಜಯಂತಿಯ ರಾಜ್ಯಮಟ್ಟದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಇನ್ನು ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ವಾರ್ಡ್ ಮಟ್ಟದಲ್ಲಿ ಈ ಕಾರ್ಯಕ್ರಮ ಆಚರಣೆಗೆ ಜಿಬಿಎ ವತಿಯಿಂದ ಆದೇಶ ಮಾಡಲಾಗಿದೆ. ಕೆಂಪೇಗೌಡರ ಆಚಾರ ವಿಚಾರ ಅಳವಡಿಸಿಕೊಂಡು ಬೆಂಗಳೂರಿನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಬೆಂಗಳೂರಿಗೆ ಹೊಸ ರೂಪ ನೀಡಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಮುಂದಿನ ಸಾವಿರಾರು ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಕೋಟ್ಯಂತರ ಉದ್ಯೋಗ ಸೃಷ್ಟಿ ಹಾಗೂ ಜನರಿಗೆ ಜೀವನ ಕಟ್ಟಿಕೊಳ್ಳುವಂತೆ ಅಂದಿನ ಬೆಂದಕಾಳೂರು(ಬೆಂಗಳೂರು) ಅನ್ನು ವ್ಯವಸ್ಥಿತವಾಗಿ ನಿರ್ಮಿಸಿದ ದೂರದೃಷ್ಟಿಯ ಮಹಾಚೇತನ ಕೆಂಪೇಗೌಡರು ಎಂದು ಸಿಎಂ ನಾಡಪ್ರಭು ಕೆಂಪೇಗೌಡರನ್ನು ಬಣ್ಣಿಸಿದರು.

ಕೆಂಪೇಗೌಡರ ಚಿಂತನೆ, ಆಚಾರ, ವಿಚಾರ ಎಲ್ಲವನ್ನು ಗಮನಲ್ಲಿಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ಓಟ, ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ, ಮಾಗಡಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಕೋಟೆ ಸಮಗ್ರ ಅಭಿವೃದ್ಧಿ ಕಾರ್ಯ ಹಮ್ಮಿಕೊಂಡಿದ್ದೇವೆ. ಮಾಗಡಿಯಲ್ಲಿರುವ ಕೆಂಪೇಗೌಡರ ಸಮಾಧಿ ಬಳಿ 10 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಐದೂವರೆ ಎಕರೆ ಖರೀದಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

ಮುಂದಿನ ಪೀಳಿಗೆಗೆ ಕೆಂಪೇಗೌಡರ ಇತಿಹಾಸ ಪರಿಚಯಿಸಲು ಕಾರ್ಯಯೋಜನೆ: “ಬೆಂಗಳೂರಿಗೆ ಬರುವವರಿಗೆ ಹಾಗೂ ಮುಂದಿನ ಪೀಳಿಗೆಗೆ ಕೆಂಪೇಗೌಡರ ಗುರುತು ಪರಿಚಯಿಸಲು, ದೇವನಹಳ್ಳಿ ಹಾಗೂ ಏರ್ಪೋರ್ಟ್ ಹತ್ತಿರದ ಟ್ರಂಪೆಟ್ ವೃತ್ತದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದವರಿಗೆ ಸೂಚನೆ ನೀಡಿದ್ದೇವೆ. ಅವರು ಸಧ್ಯದಲ್ಲೇ ಕಾರ್ಯಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಆ ಮೂಲಕ ಬೆಂಗಳೂರಿಗೆ ಬರುವವರು ಕೆಂಪೇಗೌಡರನ್ನು ಸ್ಮರಿಸುವಂತೆ ಮಾಡಲಾಗುವುದು” ಎಂದು ಸಿಎಂ ತಿಳಿಸಿದರು.

“ಕಳೆದ ವರ್ಷ ಸುಮ್ಮನಹಳ್ಳಿ ಬಳಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ಐದು ಎಕರೆ ಜಾಗವನ್ನು ನೀಡಿ ಭೂಮಿ ಪೂಜೆ ಮಾಡಿದ್ದೆವು. ಜೊತೆಗೆ ಅಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಮಾಡಲು ಮಾರ್ಗದರ್ಶನ ನೀಡಲಾಗಿದೆ. ಹಿಂದಿನ ಸರ್ಕಾರ ಈ ಪ್ರತಿಮೆಯನ್ನು ಚೆನ್ನಾಗಿ ಕಟ್ಟಿದೆ. ಆದರೆ ವಿಮಾನ ನಿಲ್ದಾಣಕ್ಕೆ ಬರುವವರಿಗೆ ಈ ಪ್ರತಿಮೆ ಕಾಣುತ್ತಿಲ್ಲ. ಇದರ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ನಾನು, ಸ್ವಾಮೀಜಿಗಳು ಹಾಗೂ ಕೃಷ್ಣ ಬೈರೇಗೌಡರೊಂದಿಗೆ ಚರ್ಚಿಸಿ ವಿಮಾನ ನಿಲ್ದಾಣ ಪ್ರಾಧಿಕಾರವರಿಗೆ ನಿರ್ದೇಶನ ನೀಡಲಾಗಿದೆ” ಎಂದರು.

“108 ಅಡಿಯ ಈ ಕಂಚಿನ ಪ್ರತಿಮೆ ಬಳಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಹಸಿರು ರೂಪಿಸಲಾಗಿದೆ. ಇಲ್ಲಿನ ಕಾಮಗಾರಿ ಮುಗಿದ ಬಳಿಕ ಇದನ್ನು ಉದ್ಘಾಟನೆ ಮಾಡುತ್ತೇವೆ. ಈ ‘ಕೆಂಪೇಗೌಡರ ಥೀಮ್ ಪಾರ್ಕ್’ ಅನ್ನು ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಣೆ ಮಾಡಲು ಸೂಚಿಸಿದ್ದೇನೆ. ಇದಕ್ಕೆ ಪ್ರಾಧಿಕಾರವೂ ಒಪ್ಪಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ಕೆಂಪೇಗೌಡರು ಎಲ್ಲ ವರ್ಗದ ಆಸ್ತಿ: “ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, 1.30 ಕೋಟಿ ವಾಹನಗಳ ಸಂಖ್ಯೆ ಇವೆ. ನಾವು ಎಷ್ಟೇ ಮೆಟ್ರೋ, ಸಾರ್ವಜನಿಕ ಸಾರಿಗೆ ತಂದರೂ ಒಬ್ಬರು ಒಂದೊಂದು ವಾಹನ ಇಟ್ಟುಕೊಂಡಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಸಾಧಿಸಲು ಮುಂದಾಗಿದ್ದೇವೆ.

ನಮ್ಮ ಮುಂದಿನ 2 ವರ್ಷಗಳ ಅವಧಿಯಲ್ಲಿ 500 ಕಿ.ಮೀ ಉದ್ದದ ಮೆಟ್ರೋ ವಿಸ್ತರಣೆಗೆ ಆಲೋಚನೆ ಮಾಡಿದ್ದು, ಕೃಷ್ಣ ಬೈರೇಗೌಡರು ಈ ಬಗ್ಗೆ ಚಿಂತನೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಒಂದು ಜಾತಿಗೆ ಸೀಮಿತವಲ್ಲ. ಇದು ಕೆಂಪೇಗೌಡರ ದೂರದೃಷ್ಟಿ, ಆಚಾರ, ವಿಚಾರಗಳ, ನೀತಿಯನ್ನು ಬಿಂಬಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಕೆಂಪೇಗೌಡರು ರಾಜ್ಯದ ಎಲ್ಲಾ ವರ್ಗದ ಆಸ್ತಿಯಾಗಿದ್ದಾರೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಸಿರಾ ತಾಲೂಕಿನ ಸ್ಪಟಿಕಪುರಿಯ ನಂಜಾವಧೂತ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗರ ಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಸಚಿವರಾದ ಕೆ.ಎಚ್. ಮುನಿಯಪ್ಪ, ಕೃಷ್ಣ ಭೈರೇಗೌಡ, ಕರ್ನಾಟಕ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ, ಶಾಸಕರಾದ ಪ್ರದೀಪ್ ಈಶ್ವರ, ರಿಜ್ವಾನ್ ಅರ್ಷದ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸಿಮಂತ್ ಸಿಂಗ್, ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ, ಬಯಪ್ಪ ಸಿಇಒ ಹರಿಮರನ್, ಸದಸ್ಯರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Deva
the authorDeva

Leave a Reply

error: Content is protected !!
Latest news
ವಾಯವ್ಯ ಸಾರಿಗೆ: ಎಂಡಿ ಆದೇಶ ಪಾಲಿಸದ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲು ನಾಳೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ BMTC- KSRTC ನಿವೃತ್ತ ನೌಕರರ ಸಂಘದಿಂದ ಬೃಹತ್‌ ಪ್ರತಿಭಟನೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: 72,186 ಹುದ್ದೆಗಳ ನೇರ ನೇಮಕಾತಿಗೆ ಆದೇಶ ಬಸ್‌ಗಳು ಸರ್ಕಾರದ್ದು, ಆದರೂ ನೌಕರರು ಸರ್ಕಾರಿ ನೌಕರರಲ್ಲ-ಹೇಗಿದೆ ಲೆಕ್ಕಾಚಾರ!? KSRTC ನೌಕರರ ಸರಿಸಮಾನ ವೇತನ ವಿಚಾರ: ಮಠದ ಪರಮ ಭಕ್ತ ಸಿಎಂಗೆ ಸಲಹೆ ನೀಡಿ ಅಂತ ಅಜ್ಜಯ್ಯನವರಲ್ಲಿ ನಿವೇದಿಸಿಕೊಂಡ ಕೂಟ ಸಂಭ್ರಮದ 517ನೇ ಕೆಂಪೇಗೌಡ ಜಯಂತಿ: ನಾಡಪ್ರಭುವಿಗೆ ನಮಿಸಿದ ಸಿಎಂ ಶಿವಕುಮಾರ್ BMTC: ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಾಹಕರು ಡ್ಯೂಟಿಗೆ ಹಾಜರಾದರೂ ರಜೆ ಪಡೆಯುವುದು ತಪ್ಪಿಸಿ- ಎಂಡಿಗೆ ಮನವಿ ಮಾಡಿದ ಶ್ರೀ... ನಮ್ಮ ಪತ್ರಿಕೋದ್ಯಮದ ಮೂಲ ತತ್ವವೇ 'ಮೂಲಗಳ ಗೌಪ್ಯತೆ ಕಾಯ್ದುಕೊಳ್ಳುವುದು' ಕೇಂದ್ರ ಸಚಿವ ಸಂಪುಟ ಪುನರ್ರಚನೆ ಕಸರತ್ತು: 48 ಗಂಟೆಯೊಳಗೆ ಪ್ರಧಾನಿ ಮೋದಿ ಪಡೆಯಲ್ಲಿ ಆಗುತ್ತಾ ಭಾರಿ ಬದಲಾವಣೆ? ಬಿಡದಿ ಟೌನ್‌ಶಿಪ್ ವಿವಾದ: ಡಿಕೆಶಿ-ಎಚ್‌ಡಿಕೆ ನಡುವೆ ಮುಂದುವರಿದ ಸಮರ