ಮಂಡ್ಯ: ದಾಖಲೆಗಳನ್ನು ಇಟ್ಟುಕೊಂಡು ಮೇಲುಕೋಟೆಗೆ ಬನ್ನಿ. ದಾಖಲೆ ಸಮೇತ ಆಣೆ-ಪ್ರಮಾಣ ಮಾಡೋಣ, ಯಾರು ಏನು ಅಂತಾ ಗೊತ್ತಾಗುತ್ತದೆ ಎಂದು ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಅಂಬರೀಶ್ ಸವಾಲು ಹಾಕಿದ್ದಾರೆ.
ಸರ್ಕಾರದ ಅನುದಾನದ ಕಾಮಗಾರಿಗಳಲ್ಲಿ ಕಮಿಷನ್ ದಂಧೆ ಮಾಡುತ್ತಿರುವ ಬಗ್ಗೆ ಜೆಡಿಎಸ್ ಶಾಸಕರು ಮತ್ತು ಸಂಸದೆ ಸುಮಲತಾ ಅಂಬರೀಶ್ ನಡುವಿನ ವಾಗ್ವಾದ ತಾರಕಕ್ಕೇರಿದ್ದು, ಈ ಸಂಬಂಧ ತಾಲೂಕಿನ ಬಿ.ಹೊಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ಮುಂದೆ ಆಣೆ ಪ್ರಮಾಣ ಮಾಡಲು ಬನ್ನಿ ಎಂದು ಸವಾಲು ಹಾಕಿದರು.
ಇನ್ನು ಆಣೆ ಮಾಡಲು ಸಿದ್ಧವಿದ್ದರೆ ಬನ್ನಿ ಯಾರು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ತಿಳಿಯುತ್ತದೆ. ಸುಮ್ಮನೆ ಏನೂ ಆರೋಪ ಮಾಡಬಾರದು. ದಾಖಲೆಗಳನ್ನು ತಂದು ಆಣೆ-ಪ್ರಮಾಣ ಮಾಡಿ ಎಂದು ಶಾಸಕರಿಗೆ ತಿರುಗೇಟು ನೀಡಿದರು.
ನನ್ನ ಸಂಸದೆ ಸರ್ಟಿಫಿಕೇಟ್ ತರುತ್ತೇನೆ. ಅವರು ಅವರ ಶಾಸಕರ ಸರ್ಟಿಫಿಕೇಟ್ ತೆಗೆದುಕೊಂಡು ಮೇಲುಕೋಟೆಗೆ ಬರಲಿ. ಅಲ್ಲಿ ಆಣೆ-ಪ್ರಮಾಣ ಮಾಡಿ ಮಾತನಾಡೋಣ. ಯಾರು ನಿಜ ಹೇಳ್ತಾ ಇದ್ದಾರೆ, ಯಾರು ಸುಳ್ಳು ಹೇಳ್ತಾರೆ ಎಂದು ಜನರಿಗೂ ಗೊತ್ತಾಗುತ್ತದೆ ಅಲ್ಲವೇ ಎಂದು ಹೇಳಿದರು.
ಇನ್ನು ನಾನು ಏನೂ ಸಾಬೀತು ಮಾಡಲು ಹೋಗ್ತಾ ಇಲ್ಲ. ಧೈರ್ಯವಿದ್ದರೆ ಮಾಧ್ಯಮಗಳ ಮುಂದೆಯೂ ಬರಲಿ. ದಾಖಲೆಗಳನ್ನು ತರಲು ಕಮಿಷನ್ ಕೊಟ್ಟಿರುವವರೇ ರೆಡಿ ಇದ್ದಾರೆ. ನಾನೇ ಸುಮ್ಮನೆ ಇರಿ ಎಂದು ಹೇಳಿದ್ದೇನೆ. ಇಲ್ಲ ಅಂದರೆ ನಿಮ್ಮ ಗುತ್ತಿಗೆ ಕೆಲಸ ಹಾಳಗುತ್ತೆ ಎಂದು ಹೇಳಿದ್ದೇನೆ. ಇಲ್ಲ ನಾವು ನಿಮ್ಮ ಸಫೋರ್ಟ್ ಆಗಿ ಇರುತ್ತೇವೆ ಎಂದು ಗುತ್ತಿಗೆದಾರರ ಸಂಘ ಹೇಳಿದೆ ಎಂದು ತಿಳಿಸಿದರು.