ಬೆಂಗಳೂರು: ಭ್ರಷ್ಟರಿಗೆ ಮತ್ತೆ ಸಿಂಹ ಸ್ವಪ್ನವಾಗಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ರಾಜ್ಯದ 9 ಕಡೆಗಳಲ್ಲಿ ದಾಳಿ ನಡೆಸಿರುವಾಧಿಕಾರಿಗಳು ಕಡತಗಳ ಪರಿಶೀಲನೆಯಲ್ಲಿ ತೋಡಗಿದ್ದಾರೆ.
ರಾಜ್ಯದ ಒಂಬತ್ತು ಜಿಲ್ಲೆಗಳ ಆರ್‌ಟಿಓ (RTO) ಚೆಕ್ ಪೋಸ್ಟ್ ಗಳ ಮೇಲೆ ಬೆಳಗ್ಗೆ 4 ಗಂಟೆಯಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರು, ಅತ್ತಿಬೆಲೆ, ವಿಜಯಪುರದ ಜಳಲಿ ಪೋಸ್ಟ್, ಬೆಳಗಾವಿಯ ನಿಪ್ಪಾಣಿ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಕೋಲಾರದ ನಂಗ್ಲಿ, ಬಳ್ಳಾರಿ, ಕೊಪ್ಪಳ, ಹೊಸಪೇಟೆ, ಗುಂಡ್ಲುಪೇಟೆ, ಬೀದರ್‌ನ ಹುಮನಬಾದ್ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿದ್ದಾರೆ.
ಚೆಕ್ ಪೋಸ್ಟ್ ಗಳಲ್ಲಿ ಮಧ್ಯವರ್ತಿಗಳು ಹಾಗೂ ಲಂಚಕ್ಕೆ ಬೇಡಿಕೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ಬೆಂಗಳೂರು ಹೊರವಲಯದ ಅತ್ತಿಬೆಲೆ ಆರ್‌ಟಿಒ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. 2 ವಾಹನಗಳಲ್ಲಿ ಬಂದಿರುವ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆ 4 ಗಂಟೆಗೆ ಕಚೇರಿ ಮೇಲೆ ರೈಡ್ ಮಾಡಿದ್ದಾರೆ. ಅತ್ತಿಬೆಲೆ ಆರ್ ಟಿಒ ಕಚೇರಿ ಮೇಲೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಕಚೇರಿ ಒಳಗೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ 20 ಮಂದಿ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಯುತ್ತಿದೆ.