
ಬೆಂಗಳೂರು: ಕಾಂಗ್ರೆಸ್ ಹಲವಾರು ವರ್ಷಗಳಿಂದ ದಲಿತರ ಮೇಲೆ ದಬ್ಬಾಳಿಕೆ ನಡೆಕೊಂಡೆ ಬರುತ್ತಿದೆ ಎಂದು ವಿಪಕ್ಷದ ನಾಯಕ ಆರ್. ಅಶೋಕ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ನಡೆದ “ಭೀಮ ಹೆಜ್ಜೆ 100ರ ಸಂಭ್ರಮ” ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತನಾಡಿದರು.
ನಾವು ದಲಿತರ ಬಗ್ಗೆ ಮಾತನಾಡುವಾಗಲೆಲ್ಲಾ ಅವರು ತುಳಿತಕ್ಕೊಳಗಾಗಿದ್ದಾರೆ ಎಂದು ಹೇಳುತ್ತೇವೆ. ಆದರೆ ಈ ರೀತಿ ತುಳಿದವರು ಯಾರು ಎಂದು ಕೇಳಿದರೆ ಉತ್ತರ ಅದು ಕಾಂಗ್ರೆಸ್ ಆಗಿರುತ್ತದೆ. ಇಷ್ಟು ವರ್ಷಗಳಿಂದ ಶೋಷಿತರನ್ನು ಕಾಂಗ್ರತೆಸ್ ತುಳಿದುಕೊಂಡೆ ಬರುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ದಲಿತರು ಇನ್ನೂ ಮೇಲೆ ಬರಂತೆ ಕಾಂಗ್ರೆಸ್ ಕಳ್ಳರು ನೋಡಿಕೊಂಡಿದ್ದಾರೆ ಎಂದು ಕಿಡಿಕಾರಿದರು
ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಂಡಿದೆ. ನರೇಂದ್ರ ಮೋದಿ ಪ್ರಧಾನಿಯಾದಾಗ, ಅಂಬೇಡ್ಕರ್ ಅವರ ಜೀವನದ ಪ್ರಮುಖ ಸ್ಥಳಗಳನ್ನು ಪಂಚತೀರ್ಥಗಳಾಗಿ ಪರಿವರ್ತಿಸಿ ಅವುಗಳನ್ನು ತೀರ್ಥಯಾತ್ರೆಯ ಸ್ಥಳಗಳನ್ನಾಗಿ ಮಾಡಿದರು. ಕಾಂಗ್ರೆಸ್ ನಾಯಕರು ತಾವು ದಲಿತರ ಪರ ಎಂದು ಹೇಳುತ್ತಾರೆ. ಆದರೆ ಅವರು ದಲಿತರನ್ನು ವಂಚಿಸಿದ್ದಾರೆ ಎಂದರು.
ವಕ್ಫ್ ಮಂಡಳಿಯು ಲಕ್ಷಾಂತರ ದಲಿತರ ಆಸ್ತಿಗಳನ್ನು ಲೂಟಿ ಮಾಡಿದೆ. ನಾನು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಭೂಕಬಳಿಕೆಯನ್ನು ಪರಿಶೀಲಿಸಿದಾಗ, ದೂರು ನೀಡಲು ಬಂದವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವುದು ದಲಿತರ ಮೇಲೆ ಇರುವ ಅವರ ಕಾಳಜಿ ಎಂಥದ್ದು ಎಂದು ತೋರಿಸುತ್ತದೆ. ಸಂವಿಧಾನ ಉಳಿಯಬೇಕು. ಕಾಂಗ್ರೆಸ್‌ನ ಪೊಳ್ಳು ಭರವಸೆಗಳು ಹೋಗಬೇಕು ಎಂದು ಹೇಳಿದರು.
ಜಾತಿ ಜನಗಣತಿ ಅವೈಜ್ಞಾನಿಕ: ಜಾತಿ ಜನಗಣತಿ ವರದಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯಲ್ಲಿ ಸಮೀಕ್ಷೆ ನಡೆಸಿದವರು ಎಲ್ಲರ ಮನೆಗೂ ಹೋಗಿಲ್ಲ. ಈ ವರದಿ ವೈಜ್ಞಾನಿಕವಲ್ಲ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ ವರದಿ. ಇದರಲ್ಲಿ ರಾಜಕೀಯ ಇರುವುದರಿಂದ ಯಾರೂ ಇದನ್ನು ಒಪ್ಪುವುದಿಲ್ಲ ಎಂದು ಹೇಳಿದರು.
ನನಗೂ ಜಾತಿ ಜನಗಣತಿ ಬೇಕು. ಆದರೆ ಈ ವರದಿಯನ್ನು ಯಾರಿಗಾದರೂ ಲಾಭ ಮಾಡಿಕೊಡಲು ಮತ್ತು ಜಾತಿಗಳ ನಡುವೆ ದ್ವೇಷದ ಬೀಜಗಳನ್ನು ಬಿತ್ತಲು ಸಿದ್ಧಪಡಿಸಲಾಗಿದೆ. ಕಾಂಗ್ರೆಸ್ ಬಯಸುತ್ತಿರುವುದು ಇದನ್ನೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿದ್ದಾರೆ, ಕಾಂಗ್ರೆಸ್ ನಾಯಕರು ಸಭೆ ನಡೆಸಿ ಈ ಬಗ್ಗೆ ಚರ್ಚಿಸಬೇಕು. ಯಾವ ಖಾತೆಗಳಿಂದ ಎಷ್ಟು ಲೂಟಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕಮಿಷನ್ ನೀಡುವವರಿಗೆ ಬಿಲ್ ಪಾವತಿಸಲಾಗುತ್ತದೆ. ಸಚಿವರ ಮಗ ಅಬಕಾರಿ ಇಲಾಖೆಯಲ್ಲಿ ಲೂಟಿ ಮಾಡುತ್ತಿದ್ದಾನೆ. ಸಚಿವರ ವಿರುದ್ಧ ಇಷ್ಟೆಲ್ಲ ಆರೋಪಗಳಿದ್ದರೂ ಸಿಎಂ ಸಮರ್ಥಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಭ್ರಷ್ಟಾಚಾರ ನಮ್ಮ ಸಂಬಂಧಿ ಎಂದು ಕಾಂಗ್ರೆಸ್ ಘೋಷಿಸಬೇಕು. ಸಿಎಂ ರಾಜೀನಾಮೆ ನೀಡದಂತೆ ತಡೆಯಲು ಕಮಿಷನ್ ವಸೂಲಿ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗಲು ಕಮಿಷನ್ ಸಂಗ್ರಹಿಸುತ್ತಿದ್ದಾರೆ. ಸಚಿವರು ಕೂಡ ಸಿಎಂ ಆಗಲು ಕಮಿಷನ್ ಸಂಗ್ರಹಿಸುತ್ತಿದ್ದಾರೆ. ವಿಧಾನಸೌಧದಲ್ಲಿರುವ ಸಚಿವರ ಕಚೇರಿಗಳು ಕಲೆಕ್ಷನ್ ಕೇಂದ್ರಗಳಾಗಿವೆ. ಜತೆಗೆ ಜನರ ಮೇಲೆ 80 ಸಾವಿರ ಕೋಟಿ ರೂಪಾಯಿ ತೆರಿಗೆ ವಿಧಿಸುವ ಮೂಲಕ ಹೊರೆ ಹೇರಲಾಗಿದೆ ಎಂದು ದೂರಿದರು.
ನಮ್ಮ ಸಂಬಂಧ ಹಾಳು ಮಾಡಲು ಸಾಧ್ಯವಿಲ್ಲ: ಜೆಡಿಎಸ್ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲವಿದೆ. ಒಟ್ಟಾಗಿ ಹೋರಾಡಬೇಕೇ ಅಥವಾ ಪ್ರತ್ಯೇಕವಾಗಿ ಹೋರಾಡಬೇಕೇ ಎಂಬುದನ್ನು ನಾವು ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸುತ್ತೇವೆ. ನಮ್ಮ ನಡುವಿನ ಸಂಬಂಧವನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.