NEWSದೇಶ-ವಿದೇಶಸಿನಿಪಥ

ನಟ ದರ್ಶನ್​​ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಕೋರ್ಟ್‌ ಅನುಮತಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಟ ದರ್ಶನ್​​ ಅವರಿಗೆ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು 57ನೇ ಸಿಸಿಎಚ್‌ ನ್ಯಾಯಾಲಯ ಅನುಮತಿ ನೀಡಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್​​ ಅವರಿಗೆ ಜೂನ್ 1ರಿಂದ 25ರವರೆಗೆ ದುಬೈ ಹಾಗೂ ಯುರೋಪ್​​ಗೆ ಹೋಗಲು ಅನುಮತಿ ಕೋರಿ ಸಿಆರ್‌ಪಿಸಿ ಸೆಕ್ಷನ್ 439(1) (b)ರಡಿ ದರ್ಶನ್ ಪರವಾಗಿ ಸುನಿಲ್ ಕುಮಾರ್ ಎಂಬವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ವೇಳೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕರು, ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಅವರಿಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿದರೆ ವಾಪಸ್ ಬರುವುದು ಅನುಮಾನ ಹೀಗಾಗಿ ಅನುಮತಿ ಕೊಡಬೇಡಿ ಎಂದು ನಿನ್ನೆ ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಇಂದಿಗೆ ಆದೇಶ ಕಾಯ್ದಿರಿಸಿತ್ತು.

ಜೈಮಾತಾ ಕಂಬೈನ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗುತ್ತಿರುವ ‘ಡೆವಿಲ್’ ಸಿನಿಮಾ ಚಿತ್ರೀಕರಣಕ್ಕಾಗಿ ಇಂದು 25 ದಿನಗಳವರೆಗೆ ವಿದೇಶಕ್ಕೆ ದರ್ಶನ್ ತೆರಳಲು ನ್ಯಾಯಾಲಯ ಅನುಮತಿ ನೀಡಿ ಆದೇಶ ಹೊರಡಿಸಿದೆ.

ಈ ಮೊದಲು ಜಾಮೀನು ನೀಡುವಾಗ ಬೆಂಗಳೂರು ಬಿಟ್ಟು ಎಲ್ಲಿಗೂ ತೆರಳುವಂತಿಲ್ಲ ಎಂದು ನ್ಯಾಯಾಲಯ ಸೂಚಿಸಿತ್ತು. ಬಳಿಕ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಿನಿಮಾ ಚಿತ್ರೀಕರಣಕ್ಕಾಗಿ ಹೋಗಲು ಅವಕಾಶ ನೀಡಿ ಜಾಮೀನಿನ ಷರತ್ತು ಸಡಿಲಿಸಿತ್ತು. ಇದೀಗ ವಿದೇಶಕ್ಕೆ ತೆರಳಲು ಅನುಮತಿ ನೀಡಿದ್ದು ಅಭಿಮಾನಿಗಳಿಗೂ ಖುಷಿ ತಂದಿದೆ.

Megha
the authorMegha

Leave a Reply

error: Content is protected !!