ರಾಯಚೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಸರ್ಕಾರ ನೀಡಿರುವ ಲಿಖಿತ ಭರವಸೆಗಳ ಈಡೇರಿಕೆಗೆ ಮತ್ತು ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರ ಕೂಟ ಆರಂಭಿಸಿರುವ ಸೈಕಲ್‌ಜಾಥಾ ಇಂದು 6ನೇ ದಿನಕ್ಕೆ ಕಾಲಿಟ್ಟಿದೆ.
ರಾತ್ರಿ ರಾಯಚೂರಿನ ಮುಗಳಖೋಡ ಜೆಡಗಾದ ಸದ್ಗುರು ಶ್ರೀಯಲ್ಗಾಲಿಂಗೇಶ್ವರ ಪುಣ್ಯಾಶ್ರಮದಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಮುಂಜಾನೆ ಎದ್ದು ನಿತ್ಯ ಕ್ರಮಗಳನ್ನು ಮುಗಿಸಿಕೊಂಡು ಮಧ್ಯಾಹ್ನ 12ಗಂಟೆ ಸುಮಾರಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ಇನ್ನು ನಿನ್ನೆ ಬೆಳಗ್ಗೆ ಮಾನ್ವಿಯಿಂದ ಹೊರಟ ಜಾಥಾ ಮಧ್ಯಾಹ್ನ ರಾಜಯಚೂರು ಜಿಲ್ಲೆಯ ಕಲ್ಲೂರಿನ ದೇವಸ್ಥಾನವೊಂದರಲ್ಲಿ ಊಟ ಮಾಡಿದ ಬಳಿಕ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಹೊರಟಿತು. ಕಲ್ಲೂರಿನಿಂದ 21 ಕಿಮೀ ಇದ್ದ ರಾಯಚೂರು ತಲುಪಿದ ಜಾಥಾವನ್ನು ಹಲವಾರು ನೌಕರರು ಸ್ವಾಗತಿಸಿದರು. ಬಳಿಕ ಸದ್ಗುರು ಶ್ರೀಯಲ್ಗಾಲಿಂಗೇಶ್ವರ ಪುಣ್ಯಾಶ್ರಮದಲ್ಲಿ ಉಳಿದುಕೊಂಡು ಅಲ್ಲೆ ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.
ತಮಗೆ 3-4 ದಶಕಗಳಿಂದ ಆಗುತ್ತಿರುವ ತಾರತಮ್ಯತೆಯನ್ನು ನಿವಾರಿಸಿ ಸರಿಸಮಾನ ವೇತನ ಪಡೆಯುವುದಕ್ಕೆ ಸಾರಿಗೆ ನೌಕರರು ಪಣತೊಟ್ಟು ಮಾಡುತ್ತಿರುವ ಈ ಜಾಥಾದಲ್ಲಿ ಪ್ರಮುಖವಾಗಿ ಕೂಟದ ಅಧ್ಯಕ್ಷ ಚಂದ್ರಶೇಖರ್, ಪದಾಧಿಕಾರಿಗಳಾದ ಅನಿಲ್, ಮಕಂದರ್ ಸಾಬ್, ಕೃಷ್ಣ ಗುಡುಗುಡಿ, ಸಂತೋಷ್ ಕುಮಾರ್, ಕೇಶವ್ ಅವರು ನಿರಂತರವಾಗಿ ಕ್ರಮಿಸುತ್ತಿದ್ದಾರೆ. ಇವರ ಜತೆಗೆ ಜಾಥಾ ತಲುಪುವ ಊರು ಪಟ್ಟಣ ಜಿಲ್ಲೆಗಳಲ್ಲಿ ಇರುವ ಸ್ಥಳೀಯ ನೌಕರರು ಭಾಗವಹಿಸುವ ಮೂಲಕ ಸಾಥ್ ನೀಡುತ್ತಿದ್ದಾರೆ.
ಇದಿಷ್ಟೇ ಅಲ್ಲದೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಾರದ ರಜೆ, ದೀರ್ಘ ರಜೆ ಇರುವ ನೌಕರರು ಮತ್ತು ವಜಾಗೊಂಡ ನೌಕರರು ತಮ್ಮ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಜಾಥಾದಲ್ಲಿ ಭಾಗವಹಿಸುತ್ತಿದ್ದಾರೆ.
ಈ ಹಿಂದೆ ಹೇಳಿರುವಂತೆ ಈ ಸೈಕಲ್ ಜಾಥಾ ಯಾರದೋ ಹೊಟ್ಟೆ ತುಂಬಿಸಲು ಅಥವಾ ನಂಬಿಸಲು ಮಾಡುತ್ತಿರುವ ನಾಮ್ ಕೇ ವಾಸ್ತೆ ಜಾಥಾವಲ್ಲ. ಇದು ನೌಕರರು ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವುದು. ಹೀಗಾಗಿ ಪ್ರತಿಯೊಬ್ಬ ನೌಕರನೂ ಇದರಲ್ಲಿ ಭಾಗವಹಿಸಬೇಕು.
ಇದು ಯಾರನ್ನೋ ಕರೆದು ಮಾಡುವ ಜಾಥಾವಲ್ಲ ಎಲ್ಲರೂ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು. ನಿಮಗಾಗಿ ನಿಮ್ಮಿಂದಲೇ ನಿಮಗೋಸ್ಕರ ನೀವೇ ನಡೆಸುತ್ತಿರುವ ಜಾಥಾ. ಹೀಗಾಗಿ ಮೀನಮೇಷ ಎಣಿಸುತ್ತಾ ಕೂರದೆ ಜಾಥಾ ಯಶಸ್ವಿಗೆ ಪ್ರತಿಯೊಬ್ಬರೂ ಸಾಥ್ ನೀಡಬೇಕಿದೆ.