ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದಕ್ಕೆ 60 ಸಾವಿರ ರೂ. ದಂಡ, ಕಟ್ಟಲಾಗದಿದ್ದರೆ ಗ್ರಾಮದಿಂದ ಕುಟುಂಬ ಬಹಿಷ್ಕಾರದ ಬೆದರಿಕೆ
ಕೋಲಾರ: ಗ್ರಾಮ ದೇವತೆಯ ಮೆರವಣಿಗೆಯ ವೇಳೆ ದಲಿತ ಕುಟುಂಬಕ್ಕೆ ಸೇರಿದ ಬಾಲಕನೊಬ್ಬ ದೇವರ ಮೂರ್ತಿ ಮುಟ್ಟಿದಕ್ಕೆ ಆತನ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಕಟ್ಟುವಂತೆ ಬೆದರಿಕೆ ಹಾಕಿದ ಘಟನೆ ಜಿಲ್ಲೆ ಮಾಲೂರು ತಾಲೂಕಿನ ಹುಳ್ಳೆರಹಳ್ಳಿಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಳ್ಳೆರಹಳ್ಳಿಯ ದಲಿತ ಬಾಲಕ ಚೇತನ್ ದೇವರ ಮೂರ್ತಿ ಮುಟ್ಟಿದ್ದು, ಆತನ ಕುಟುಂಬಕ್ಕೆ ಜಾತಿ ಪೀಡೆಗಳು ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಬಾಲಕನ ಕುಟುಂಬ ಕಂಗಾಲಾಗಿದೆ.
ಮೂರು ದಿನಗಳ ಹಿಂದೆ ಹುಳ್ಳೇರಹಳ್ಳಿ ಗ್ರಾಮದಲ್ಲಿ ದೇವಾಲಯವೊಂದರ ಉದ್ಘಾಟನಾ ಸಮಾರಂಭವಿತ್ತು. ಈ ಹಿನ್ನೆಲೆ ಗ್ರಾಮದಲ್ಲಿ ಭೂ ದೇವಿಯ ಉತ್ಸವ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದರು. ಅದರಂತೆ ಸಮಾರಂಭ ನಡೆಯುತ್ತಿತ್ತು. ಆದರೆ, ಉತ್ಸವದ ವೇಳೆ ದಲಿತ ಕುಟುಂಬದ ಚೇತನ್ ಎಂಬ ಬಾಲಕ ದೇವರನ್ನು ಮುಟ್ಟಿದ ಎಂಬ ಕಾರಣ ಮುಂದಿಟ್ಟುಕೊಂಡು ಆತನಿಗೆ ಬೆದರಿಕೆ ಹಾಕಲಾಗಿದೆ.
ಅಲ್ಲದೆ 60 ಸಾವಿರ ರೂಪಾಯಿ ದಂಡ ಕಟ್ಟದಿದ್ದರೆ ಕುಟುಂಬವನ್ನು ಊರಿನಿಂದ ಬಹಿಷ್ಕರಿಸುವುದಾಗಿ ಪುಂಡರು ಬೆದರಿಕೆ ಹಾಕಿದ್ದಾರೆ. ಇದರಿಂದ ಬಾಲಕನ ಕುಟುಂಬ ಭಯ ಭೀತಗೊಂಡಿದ್ದು, ಮುಂದೆ ದಾರಿ ಕಾಣದೆ ಕಂಗಾಲಾಗಿದೆ.
ಇನ್ನೊಂದೆಡೆ ಘಟನೆ ಸಂಬಂಧ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಡಿಸಿದ್ದು, ಸರ್ಕಾರ ಏನು ಮಾಡ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ನಿಮ್ಮ ದೇವರಿಗೆ ದಲಿತರು ಆಗುವುದಿಲ್ಲ, ದಲಿತರು ಕಟ್ಟುವ ದಂಡದ ದುಡ್ಡು ಆಗುತ್ತಾ ಎಂದು ಆಕ್ರೋಶದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಇನ್ನು ಪೊಲೀಸರ ವೈಫಲ್ಯದಿಂದಾಗಿ ಆಗಾಗ ಇಂತಹ ಘಟನೆಗಳು ನಡೆಯುತ್ತಿವೆ. ಅಸ್ಪೃಶ್ಯತೆ ಆಚರಣೆಯಂತಹ ಘಟನೆಗಳು ನಡೆದಾಗ ಪೊಲೀಸರು ರಾಜಿ ಮೂಲಕವೇ ಪ್ರಕರಣಗಳನ್ನು ಮುಗಿಸಲು ಮುಂದಾಗುತ್ತಾರೆ. ಇದರಿಂದಾಗಿ ಆರೋಪಿಗಳ ರಕ್ಷಣೆ ಮಾಡುವಂತಹ ಕೆಲಸಗಳು ನಡೆಯುತ್ತವೆ ಎನ್ನುವ ಆಕ್ರೋಶಗಳು ಘಟನೆಯ ಬೆನ್ನಲ್ಲೇ ಕೇಳಿ ಬಂದಿವೆ.
ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ ಎಂದು ಅಮೃತ ಮಹೋತ್ಸವ ಆಚರಣೆ ಮಾಡಿದರೂ, ಈಗಲೂ ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಆಳುವ ಸರ್ಕಾರಗಳು ಅಸ್ಪೃಶ್ಯತೆ ತಡೆಗೆ ಕಠಿಣವಾದ ಕಾನೂನನ್ನು ತರುವ ಅಗತ್ಯವಿದೆ ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿವೆ.
ರಾಜ್ಯದಲ್ಲಿ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿಯೇ ಇದೆ. ರಾಜ್ಯದ ಕೆಲವು ಗ್ರಾಮಗಳಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಿಸುವುದು ಮಾತ್ರವಲ್ಲದೆ ಕುಡಿಯುವ ನೀರು, ಅಂಗನವಾಡಿ ಪ್ರವೇಶ ಹಾಗೂ ಪಡಿತರ ಪಡೆಯಲು ಅಡ್ಡಿ ಉಂಟು ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ ಎಂದು ಸ್ವತಃ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಿಳಿಸಿದೆ.
ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಇದೇ ಸೆ.16ರಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪುಜಾರಿ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ನಡೆದ ಪ್ರಕರಣಗಳನ್ನು ಉಲ್ಲೇಖಿಸಿ ವಿವರವಾದ ಉತ್ತರವನ್ನು ನೀಡಿದ್ದಾರೆ. ಈ ಮೂಲಕ ಅಸ್ಪೃಶ್ಯತಾ ಆಚರಣೆ ಇನ್ನೂ ಜೀವಂತವಾಗಿ ರಾಜ್ಯದಲ್ಲಿ ಇದೆ ಎಂದು ಅಧಿಕೃತವಾಗಿಯೇ ಒಪ್ಪಿಕೊಂಡಿದ್ದಾರೆ.
ಇದರ ನಡುವೆಯೇ ಕೋಲಾರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿರುವುದು ರಾಜ್ಯದ ಪ್ರಜ್ಞಾವಂತರನ್ನು ಚಿಂತೆಗೆ ದೂಡಿದೆ. ಅಲ್ಲದೆ ಇದಕ್ಕೆ ಕಠಿಣವಾದ ನಿಲುವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕಾದ ಅವಶ್ಯವಿದೆ ಎಂದು ಹೇಳುತ್ತಿದ್ದಾರೆ.