ಬಳ್ಳಾರಿ: ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆಟೋವೊಂದು ಎಚ್‌ಎಲ್‌ಸಿ (HLC) ಕಾಲುವೆಯಲ್ಲಿ ಪಲ್ಟಿಯಾಗಿ ನಾಪತ್ತೆಯಾಗಿದ್ದ ಕೃಷಿ ಕಾರ್ಮಿಕರಾದ ಹುಲಿಗೆಮ್ಮ ಮೃತದೇಹವು ಬಂಡಿಹಟ್ಟಿ ಸಮೀಪ ಇಂದು ಪತ್ತೆಯಾಗಿದೆ.
ಶುಕ್ರವಾರ (ಸೆ.16) ಮಧ್ಯಾಹ್ನ ಹುಲಿಗೆಮ್ಮ ಮೃತದೇಹ ಪತ್ತೆಯಾಗಿದ್ದು, ಅಪಘಾತದ ವೇಳೆ ಕಾಲುವೆಯಲ್ಲಿ ನಾಪತ್ತೆಯಾಗಿದ್ದ ಮೂವರ ಮೃತ ದೇಹಗಳು ಸಿಕ್ಕಂತಾಗಿವೆ ಎಂದು ಪೊಲೀಸರು ಮಾಹಿರಿ ನೀಡಿದ್ದಾರೆ.
ಗುರುವಾರ ಸಂಜೆ ನಾಗರತ್ನಮ್ಮ ಅವರ ಮೃತದೇಹ ಬಳ್ಳಾರಿ ಸಮೀಪದ ಬಂಡಿಹಟ್ಟಿಯಲ್ಲಿ ಸಿಕ್ಕಿದ್ದರೆ, ಶುಕ್ರವಾರ ಬೆಳಗ್ಗೆ ಆಂಧ್ರಪ್ರದೇಶದ ಉಂತಕಲ್ ಸಮೀಪ ಮಲ್ಲಮ್ಮ (30) ಮೃತದೇಹ ಸಿಕ್ಕಿತ್ತು. ಈಗ ಹುಲಿಗೆಮ್ಮ ಅವರ ಮೃತದೇಹವೂ ದೊರೆತಿದ್ದು, ಮೂರು ಮೃತದೇಹ ಪತ್ತೆಯಾದಂತಾಗಿದೆ.
ಕಳೆದ ಎರಡು ದಿನಗಳಿಂದ ಮೃತರ ಸಂಬಂಧಿಗಳು ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಶುಕ್ರವಾರ ದೊರೆತಿರುವ ಮಲ್ಲಮ್ಮ ಮತ್ತು ಹುಲಿಗೆಮ್ಮ ಮೃತ ದೇಹಗಳನ್ನು ವಿಮ್ಸ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಂತರ ಕೊಳಗಲ್ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲಾಗಿದೆ.
ಬಳ್ಳಾರಿ ತಾಲೂಕಿನ ಕೊಳಗಲ್ ಸಮೀಪದಲ್ಲಿ ನಡೆದಿದ್ದ ಅಪಘಾತದಲ್ಲಿ ಐವರನ್ನು ರಕ್ಷಣೆ ಮಾಡಲಾಗಿತ್ತು. ಮೂವರ ಮೃತದೇಹ ಘಟನಾ ಸ್ಥಳದಲ್ಲಿ ಸಿಕ್ಕಿದ್ದರೆ, ಇನ್ನುಳಿದ ಮೂರು ಮೃತದೇಹಗಳು ನೀರಿನಲ್ಲಿ ನಾಪತ್ತೆಯಾಗಿದ್ದವು.
ಮೃತರ ಕುಟುಂಬಗಳ ಪರಿಹಾರ ನೀಡಲು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿಯವರು ಸರ್ಕಾರಕ್ಕೆ ವರದಿ ಕಳಿಸಿದ್ದು, ಶೀಘ್ರದಲ್ಲಿಯೇ ಪರಿಹಾರ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.