ಬೆಂಗಳೂರು: ಬಿಬಿಎಂಪಿ ವತಿಯಿಂದ ಮೂರು ದಿನಗಳ “ನಮ್ಮ ರಸ್ತೆ-2025” ಕಾರ್ಯಗಾರ, ಪ್ರದರ್ಶನ ಹಾಗೂ ಸಮಾವೇಶ ಕಾರ್ಯಕ್ರಮಕ್ಕೆ ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ನಮ್ಮ ರಸ್ತೆ-2025 ಫೆ. 20, 21 ಹಾಗೂ 22 ರಂದು ಕಾರ್ಯಕ್ರಮದಲ್ಲಿ ಕಾರ್ಯಗಾರಗಳು, ವಿವಿಧ ಸಂಚಾರ ಪದ್ಧತಿಗಳ ಪ್ರದರ್ಶನ ಹಾಗೂ ಸಮಾವೇಶಗಳು ನಡೆಯಲಿವೆ. ಒಂದೇ ಸೂರಿನಡಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸಂಚಾರ ದಟ್ಟಣೆ ನಿಯಂತ್ರಣದ ಕುರಿತು ಪರಿಹಾರಗಳನ್ನು ಕಂಡುಕೊಳ್ಳಲು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.
“ನಮ್ಮ ರಸ್ತೆ 2025” ಸುಸ್ಥಿರ ನಗರ ವಿನ್ಯಾಸ ಸೃಷ್ಟಿಸುವಲ್ಲಿ ಬಹುಮುಖ್ಯ ಪಾತ್ರವಹಿಸಲಿರುವ ಸಮಗ್ರ ಬಹು ಮಾದರಿಯ ಸಾರಿಗೆ ವ್ಯವಸ್ಥೆಗಳ ಕುರಿತಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೋಟಾರು ರಹಿತ ಸಾರಿಗೆಗಳನ್ನೊಳಗೊಂಡಂತೆ ಭವಿಷ್ಯದ ಯೋಜನಾಬದ್ಧ ನಗರವನ್ನು ರೂಪಿಸುವಲ್ಲಿ ವಿಶ್ವಾಸಾರ್ಹ ಮಾಹಿತಿ ಹೇಗೆ ಸಹಾಯಕವಾಗಲಿದೆ ಎನ್ನುವುದನ್ನು ತಿಳಿಸಲಿದೆ.
ನಗರದಲ್ಲಿ ವಿಸ್ತರಿಸುತ್ತಿರುವ ಮೆಟ್ರೋ, ಉಪ ನಗರ ರೈಲು ಮತ್ತು ಬಸ್ಸುಗಳ ಜಾಲಗಳು ಸಮಗ್ರ ಚಲನಶೀಲ ಪರಿಸರ ವ್ಯವಸ್ಥೆಯನ್ನು ರೂಪಿಸಲು ಅನನ್ಯವಾದ ಅವಕಾಶವನ್ನು ಒದಗಿಸುತ್ತಿರುವ ಹಂತದಲ್ಲಿ, ಬೆಂಗಳೂರು ನಗರವು ತನ್ನ ಸಾರಿಗೆ ವ್ಯವಸ್ಥೆಯನ್ನು ಪರಿವರ್ತಿಸುವಲ್ಲಿ ಒಂದು ನಿರ್ಣಾಯಕ ಘಟ್ಟದಲ್ಲಿದೆ.
‘ನಮ್ಮ ರಸ್ತೆ-2025’ ಪರಿಪೂರ್ಣ ಹಂತದ ಸಂಪರ್ಕವನ್ನು ಖಚಿತಪಡಿಸಿಕೊಳ್ಳುತ್ತಾ, ನಗರದ ಚಲನತೆಯನ್ನು ಪುನರ್ ರೂಪಿಸಲು, ಸಂಪರ್ಕ ಸಾಧ್ಯತೆಯನ್ನು ಹೆಚ್ಚಿಸಲು ಮತ್ತು ಪಾದಚಾರಿಗಳು ಮತ್ತು ಸೈಕಲ್ ಸವಾರರ ಸುರಕ್ಷಿತತೆಯಲ್ಲಿನ ಸವಾಲುಗಳನ್ನು ಸ್ವೀಕರಿಸಲು ಪ್ರಮುಖ ಬಾಧ್ಯಸ್ಥರನ್ನು ಒಟ್ಟಿಗೆ ತರುವ ವೇದಿಕೆ ಇದಾಗಿದೆ.
ಈ ಕಾರ್ಯಕ್ರಮದಲ್ಲಿ ಪಾಲಿಕೆ, ಬಿಎಂಟಿಸಿ, ಮೆಟ್ರೋ, ಕೆರೈಡ್(KRide)ನ ಅಧಿಕಾರಿಗಳು, ಡಲ್ಟ್ ಇಲಾಖೆಯ ತಜ್ಞರುಗಳು, ವಿಶೇಷವಾಗಿ ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಗಳು, ನಾಗರಿಕ ಸಮೂಹ, ನಗರ ಯೋಜಕರು, ಸ್ಟಾರ್ಟಪ್‌ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಚಾರ ಪರಿಣಿತರು ಉಪಸ್ಥಿತರಿರಲಿದ್ದಾರೆ.
“ನಮ್ಮ ರಸ್ತೆ ಕೈಪಿಡಿ” ಪುಸ್ತಕ ಬಿಡುಗಡೆ: ‘ನಮ್ಮ ರಸ್ತೆ-2025’ರ ಪ್ರಮುಖವಾದ ಅಂಶವೆಂದರೆ, ‘ನಮ್ಮ ರಸ್ತೆ ಕೈಪಿಡಿ’ಯ ಬಿಡುಗಡೆ. ಇದು, ರಸ್ತೆಯ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿನ ಅತ್ಯುತ್ತಮ ವಾಡಿಕೆಗಳ ವಿವರಗಳನ್ನು ನೀಡುವ ಸಚಿತ್ರ ಕೈಪಿಡಿಯಾಗಿದೆ.
ಈ ಕೈಪಿಯು ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 12,878.78 ಕಿ.ಮೀ. ಉದ್ದ ರಸ್ತೆಗಳು, ಪ್ರಮಾಣಿತ ಕಾರ್ಯವಿಧಾನ(SOP) ಪ್ರಕಾರ ಯಾವ ರೀತಿ ಇರಬೇಕೆಂಬುದನ್ನು ತಿಳಿಸಲಿದೆ. ರಸ್ತೆಯ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿನ ಉತ್ತಮ ಅಭ್ಯಾಸಗಳನ್ನು ವಿವರಣಾತ್ಮಕವಾಗಿ ವಿವರಿಸುತ್ತದೆ. ಜೊತೆಗೆ ಇಂಜಿಯರ್ ಗಳು, ನಾಗರಿಕರು ಹಾಗೂ ಯುವ ಜನರಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಜ್ಞಾನವನ್ನು ನೀಡಲಿದೆ.
ಈ ವೇಳೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ಬಿ.ಎಂ.ಆರ್.ಡಿ.ಎ ಕಾರ್ಯದರ್ಶಿಯಾದ ರಾಜೇಂದ್ರ ಚೋಳನ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಡಬ್ಲ್ಯೂ.ಆರ್.ಐನ ಸಿಇಒ ಮಾಧವ ಪೈ, ಭಾರತೀಯ ವಿಜ್ಞಾನ ಸಂಸ್ಥೆಯ ಫ್ರೊ. ಆಶೀಸ್ ವರ್ಮಾ, ನಗರ ತಜ್ಞರಾದ ಆರ್.ಕೆ ಮಿಶ್ರಾ, ನರೇಶ್ ನರಸಿಂಹನ್ ಮತ್ತಿತರು ಉಪಸ್ಥಿತರಿದ್ದರು.