NEWSನಮ್ಮರಾಜ್ಯಶಿಕ್ಷಣ

ಶಿಕ್ಷಣದಿಂದ ಸ್ವಾಭಿಮಾನ ಬೆಳೆದು ಸಮಾಜದ ಆಸ್ತಿಯಾಗಲು ಸಾಧ್ಯ: ಸಿಎಂ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸರ್ವರಿಗೂ ಶಿಕ್ಷಣ ಕೊಡುವುದು ಸರ್ಕಾರದ ಜವಾಬ್ದಾರಿ. ಶಿಕ್ಷಣ ಕೇವಲ ಜ್ಞಾನ ಕೊಡುವುದಿಲ್ಲ, ವ್ಯಕ್ತಿತ್ವವನ್ನು ರೂಪಿಸುತ್ತದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳಲೇಬೇಕು. ಇದರಿಂದ ಸ್ವಾಭಿಮಾನ ಬೆಳೆದು ಸಮಾಜದ ಆಸ್ತಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಶಾಲಾ ಶೈಕ್ಷಣಿಕ ವರ್ಷದ ಪುನರಾರಂಭದ ಪ್ರಯುಕ್ತ ಆಡುಗೋಡಿಯ ಕರ್ನಾಟಕ ಸರ್ಕಾರಿ ಕನ್ನಡ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಲಿತ ಕುಟುಂಬದಲ್ಲಿ ಹುಟ್ಟಿದ ಡಾ.ಬಾಬಾ ಸಾಹೇಬರು ದೇಶ ಕಂಡ ಮಹಾನ್ ವಿದ್ವಾಂಸರಲ್ಲಿ ಒಬ್ಬರು. ಪ್ರತಿಭೆ ಯಾರ ಸ್ವತ್ತೂ‌ ಅಲ್ಲ. ಅವಕಾಶ ಸಿಕ್ಕರೆ ಎಲ್ಲರ ಒಳಗಿರುವ ಪ್ರತಿಭೆಯೂ ಹೊರಗೆ ಬರುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ ಎಂದರು.

ಇನ್ನು 1992-93 ರಲ್ಲಿ ನಾನು ಹಣಕಾಸು ಮಂತ್ರಿಯಾಗಿದ್ದಾಗ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಲು ಆರ್ಥಿಕ ಅನುಮೋದನೆ ನೀಡಿದ್ದೆ. ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಈ ಬಾರಿಯೂ ₹725 ಕೋಟಿ ಹಣ ಕೊಟ್ಟಿದ್ದೇವೆ. ಕಳೆದ ವರ್ಷವೂ ಕೊಟ್ಟಿದ್ದೇವೆ. ಗುಣಮಟ್ಟದಲ್ಲಿ ಸರ್ಕಾರಿ ಶಾಲೆಗಳು ಹಿಂದುಳಿದಿಲ್ಲ ಎಂದು ಹೇಳಿದರು.

ಮಕ್ಕಳಿಗೆ ಉತ್ತಮ‌ ಪೌಷ್ಠಿಕಾಂಶ ಸಿಕ್ಕರೆ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಿ ಓದಲು ಸಾಧ್ಯ. ಈ‌ ಕಾರಣಕ್ಕೇ ನಾವು ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ, ಹಾಲು ಕೊಡುತ್ತಿದ್ದೇವೆ. ಇದರ ಜತೆಗೆ ಪಠ್ಯ, ಸಮವಸ್ತ್ರ, ಶೂ, ಸಾಕ್ಸ್, ಪುಸ್ತಕಗಳನ್ನೂ ಸರ್ಕಾರದಿಂದಲೇ ಕೊಡುತ್ತಿದ್ದೇವೆ ಎಂದು ವಿವರಿಸಿದರು.

ಮಕ್ಕಳು ಎಷ್ಟು ಭಾಷೆ ಕಲಿತರೂ ಒಳ್ಳೆಯದೆ. ಹೆಚ್ಚೆಚ್ಚು ಭಾಷೆ ಕಲಿತು ಕನ್ನಡದಲ್ಲಿ ಮುಂದಿರಿ. ಕನ್ನಡದಲ್ಲಿ ಕಲಿತರೆ ಮಕ್ಕಳು ಪ್ರತಿಭಾವಂತರಾಗುವುದಿಲ್ಲ ಎನ್ನುವುದು ತಪ್ಪು. ವೈಜ್ಞಾನಿಕ ಶಿಕ್ಷಣ ಪಡೆದು, ವೈಚಾರಿಕ ಗುಣ ಬೆಳೆಸಿಕೊಂಡರೆ ಮಕ್ಕಳು ಉತ್ತಮ ಪ್ರತಿಭಾವಂತರಾದಂತೆ. ಆದ್ದರಿಂದ ಸರ್ಕಾರಿ ಶಾಲೆಗಳ ಹಾಜರಾತಿ ಹೆಚ್ಚಾಗಬೇಕು ಎಂದರು.

ಇನ್ನು ಗ್ರೇಸ್ ಮಾರ್ಕ್ಸ್ ಇಲ್ಲದೆ ಮಕ್ಕಳು ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರಯತ್ನಿಸುತ್ತಿದೆ. ಮಕ್ಕಳ‌ ಅನುಕೂಲಕ್ಕಾಗಿ ಎರಡನೇ ಮತ್ತು ಮೂರನೇ ಸಪ್ಲಿಮೆಂಟರಿ ಪರೀಕ್ಷೆಗಳಿಗೆ ಶುಲ್ಕ ಇಟ್ಟಿಲ್ಲ ಎಂದು ತಿಳಿಸಿದರು.

ಸಚಿವ ರಾಮಲಿಂಗಾರೆಡ್ಡಿಯವರ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು ಉತ್ತಮ‌ ಗುಣಮಟ್ಟ ಕಾಯ್ದುಕೊಂಡಿವೆ. ಇದೇ ಗುಣಮಟ್ಟ ಇಡೀ ರಾಜ್ಯಾದ್ಯಂತ ಆಗಬೇಕು ಎಂದು ಹೇಳಿದರು.

Megha
the authorMegha

Leave a Reply

error: Content is protected !!