ಕೆ.ಆರ್.ಪೇಟೆ: ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಸ್ತ್ರ. ಪೋಷಕರು ಮಕ್ಕಳ ಹಕ್ಕುಗಳನ್ನು ಮೊಟಕುಗೊಳಿಸದೇ ಕಡ್ಡಾಯವಾಗಿ ಶಾಲೆಗೆ ಕಳಿಸಿ ಶಿಕ್ಷಣ ಕೊಡಿಸಿ ಭವಿಷ್ಯದ ನಾಗರಿಕರನ್ನಾಗಿ ತಯಾರು ಮಾಡಿ ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಶಕುಂತಲಾ ಕರೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದ ಕಾಟೇಜ್ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಶಾಲೆಗೆ ಹೋಗಿ ಆಟ ವಾಡಿಕೊಂಡು ಪಾಠ ಕಲಿಯುವ ಚಿಕ್ಕ ಮಕ್ಕಳ ಉಜ್ವಲವಾದ ಭವಿಷ್ಯಕ್ಕೆ ಕಂಟಕರಾಗಿ ಸಾಮಾಜಿಕ ಅನಿಷ್ಠ ಪದ್ಧತಿಯಾದ ಬಾಲ ಕಾರ್ಮಿಕ ಪದ್ದತಿಯನ್ನು ಬೆಂಬಲಿಸದೆ ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡಿ ಸಾಮಾಜಿಕ ಅನಿಷ್ಟವಾಗಿರುವ ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಪಣ ತೊಡಬೇಕು ಎಂದರು.
ಜೆಎಂಎಫ್ಸಿ ಸಿವಿಲ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಕೃಪಾ ಮಾತನಾಡಿ, 15ವರ್ಷದ ಒಳಗಿನ ಮಕ್ಕಳ ಹಕ್ಕುಗಳನ್ನು ನಾಗರೀಕ ಸಮಾಜದ ಪ್ರತಿಯೊಬ್ಬರೂ ಗೌರವಿಸಿ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳದೆ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು. ಬಾಲ ಕಾರ್ಮಿಕ ಪದ್ದತಿಯನ್ನು ಬೆಂಬಲಿಸಿ ಮಕ್ಕಳನ್ನು ದುಡಿಸಿಕೊಂಡರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಜತೆಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಸಿದರು.
ಅಪರ ಸಿವಿಲ್ ನ್ಯಾಯಾಧೀಶರಾದ ಅರ್ಪಿತಾ, ತಹಸೀಲ್ದಾರ್ ನಿಸರ್ಗಪ್ರಿಯಾ, ವಕೀಲರ ಸಂಘದ ಅಧ್ಯಕ್ಷ ರವಿಶಂಕರ್, ಕಾರ್ಯದರ್ಶಿ ರಾಜೇಗೌಡ, ಸಹಾಯಕ ಸರ್ಕಾರಿ ಅಭಿಯೋಜಕ ಶಿವಪ್ಪ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಮಂಜುನಾಥ್, ಪಟ್ಟಣದ ಬಾಲ ಯೇಸು ಚರ್ಚಿನ ರೆವರೆಂಡ್ ಫಾದರ್ ಪೌಲ್ವಿಸ್ ಥಾಮಸ್, ಕಾಟೆಜ್ ಶಾಲೆಯ ಮುಖ್ಯ ಶಿಕ್ಷಕಿ ಏಮಿಲ್ಡ ಕ್ವಾಡ್ರಸ್ ಪಿಂಟೋ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ್, ತಾಲೂಕು ಕಾರ್ಮಿಕ ನಿರೀಕ್ಷಕ ಗಂಗಾಧರ್ ಸೇರಿದಂತೆ ವಕೀಲರ ಸಂಘದ ಉಪಾಧ್ಯಕ್ಷ ದಿನೇಶ್, ನಿರಂಜನ, ಎಚ್.ರವಿ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.