ಬೆಂಗಳೂರು: ಬಿಎಂಟಿಸಿ ಚನ್ನಸಂದ್ರ ಘಟಕ 21ರಲ್ಲಿ ಸೋಮವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡ ಚಾಲಕನ ಕುಟುಂಬಕ್ಕೆ ನ್ಯಾಯ ಸಿಗುವರೆಗೂ ಹೋರಾಟ ಮಾಡುತ್ತೇವೆ ಎಂದು ಸಂಸ್ಥೆ ನೌಕರರು ಮತ್ತು ಸಂಘಟನೆಗಳ ಮುಖಂಡರು ಡಿಪೋ ಮುಂದೆ ಧರಣಿ ನಡೆಸುತ್ತಿದ್ದಾರೆ.
ಇಂದು ( ಮಂಗಳವಾರ ) ಮುಂಜಾನೆ 6ಗಂಟೆಯಿಂದ ಡಿಪೋಬಳಿ ಕುಳಿತಿದ್ದು, ಮೃತ ಚಾಲಕ ಹೊಳೆ ಬಸಪ್ಪ ಅವರ ಕುಟುಂಬಕ್ಕೆ ಕೂಡಲೇ ಸರ್ಕಾರ 50 ಲಕ್ಷ ರೂ. ಪರಿಹಾರ ಘೋಷಿಸಬೇಕು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಅದರಂತೆ ಡಿಪೋ ವ್ಯವಸ್ಥಾಪಕರನ್ನು ವಜಾ ಮಾಡಿ ಕಾನೂನು ರೀತಿ ಕ್ರಮ ತೆಗೆದುಕೊಂಡು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಚಾಲಕ ಹೊಳೆ ಬಸಪ್ಪ ಅವರಿಗೆ ಇಬ್ಬರು ಮಕ್ಕಳಿದ್ದು ಅವರಲ್ಲಿ ಹೆಣ್ಣುಮಗಳು ಅಂಗವಿಕೆಲೆಯಾಗಿದ್ದಾರೆ. ಅಲ್ಲದೆ ಪುತ್ರನಿಗೆ ಈಗ 14 ವರ್ಷ ವಯಸ್ಸು, ಮತ್ತೆ ಮೃತರ ಪತ್ನಿ ಈ ಆಗಾತದಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮೃತರ ಕುಟುಂಬದ ನಿರ್ವಾಹಣಾ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇನ್ನು ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮಜರುಗಿಸಬೇಕು. ಮೃತ ಚಾಲಕ ಹೊಳೆ ಬಸಪ್ಪ ಅವರ ಕುಟುಂಬಕ್ಕೆ ಬರಬೇಕಿರುವ ಎಲ್ಲ ಸೌಲಭ್ಯಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಧರಣಿಯಲ್ಲಿ ನೌಕರರ ಮುಖಂಡರಾದ ಎಚ್.ಡಿ.ನಾಗೇಂದ್ರ, ಎಚ್.ಆರ್.ಜಗದೀಶ್, ಪಿ.ಹರೀಶ್‌ಗೌಡ, ಎನ್.ಸುಧಾಕರರೆಡ್ಡಿ, ಡಿ.ರಾಮು, ಲಕ್ಷ್ಮಣ ಮಗವೀರ್, ಯೋಗೇಶ್ ಇದ್ದಾರೆ. ಧರಣಿಗೆ ಬೆಂಬಲ ನೀಡಲು ಎಎಪಿ ಮುಖಂಡರು ಬರುತ್ತಿದ್ದಾರೆ.
1 Comment