ಅನುಕಂಪದ ಆಧಾರದ ಉದ್ಯೋಗ: ಅರ್ಜಿ ಸಲ್ಲಿಸಿದ ಮೂರು ತಿಂಗಳಲ್ಲಿ ಪರಿಗಣಿಸಬೇಕು – ಹೈ ಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಅನುಕಂಪ’ದ ಆಧಾರದಲ್ಲಿ ಮೃತರ ಉತ್ತರಾಧಿಕಾರಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೆ ಅದನ್ನು ಮೂರು ತಿಂಗಳಲ್ಲಿ ಪರಿಗಣಿಸಬೇಕು. ಇಲ್ಲದಿದ್ದರೆ, ಅರ್ಜಿದಾರರಿಗೆ ಪರಿಹಾರ ರೂಪದಲ್ಲಿ ವೇತನ ಪಾವತಿಸುವ ಹೊಣೆ ಸಕ್ಷಮ ಪ್ರಾಧಿಕಾರದ್ದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅನುಕಂಪ ಆಧಾರ’ದ ಉದ್ಯೋಗಕ್ಕೆ ಸಲ್ಲಿಸಿದ ಅರ್ಜಿಗಳನ್ನು ಸರ್ಕಾರ ತಾತ್ಸಾರದಿಂದ ನೋಡುತ್ತಿದೆ. ಅರ್ಜಿಗಳನ್ನು ಪರಿಗಣಿಸಲು ಮೀನಮೇಷ ಎಣಿಸುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಸರ್ಕಾರದ ಉದಾಸೀನತೆಗೆ ಬ್ರೇಕ್ ಹಾಕಿದೆ.
ಮೈಸೂರು ನಿವಾಸಿ ಎನ್. ಹೃತಿಕ್ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಪುಸ್ತುತ ಉಚ್ಚ ನ್ಯಾಯಾಲಯದಲ್ಲಿ ಇಂತಹ ಹಲವಾರು ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ‘ಅನುಕಂಪದ ಆಧಾರದ ನೌಕರಿಗೆ ಅರ್ಜಿ ಸಲ್ಲಿಸಿದರೂ ಸೂಕ್ತ ಉದ್ಯೋಗ ನೀಡಲು ಸರ್ಕಾರಿ ಪ್ರಾಧಿಕಾರಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದರೆ ಸಂತ್ರಸ್ತರಾದವರಿಗೆ ನ್ಯಾಯ ಸಿಗುವು ಯಾವಾಗ ಎಂದು ನ್ಯಾಯಪೀಠ ಪ್ರಶ್ನಿಸಿದೆ.
ಇಂತಹ ಅರ್ಜಿಗಳನ್ನು ಪರಿಗಣಿಸದೆ ಬಾಕಿ ಉಳಿಸಿಕೊಂಡರೆ ಅನುಕಂಪದ ನೌಕರಿ ಒದಗಿಸಲು ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ನಾಗರಿಕ ಸೇವೆಗಳ (ಅನುಕಂಪದ ನೌಕರಿ) ನಿಯಮಗಳು-1996 ಖಂಡಿತವಾಗಿ ಸೋಲುತ್ತದೆ. ಇನ್ನೊಂದೆಡೆ, ಮೃತ ನೌಕರನನ್ನು ಕಳೆದುಕೊಂಡ ಕುಟುಂಬ ಕೂಡ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ, ಅನುಕಂಪದ ನೌಕರಿಗೆ ಅರ್ಜಿ ಸಲ್ಲಿಸಿದ ಮೂರು ತಿಂಗಳಲ್ಲಿ ವಿಲೇವಾರಿ ಮಾಡದಿದ್ದರೆ, ವೇತನ ನೀಡುವುದು ಸಕ್ಷಮ ಪ್ರಾಧಿಕಾರದ ಹೊಣೆ ಎಂದು ಆದೇಶ ನೀಡಿದೆ.
ಅಲ್ಲದೆ ನ್ಯಾಯಪೀಠ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ಮನವಿಯನ್ನು ಎಂಟು ವಾರದಲ್ಲಿ ಇತ್ಯರ್ಥ ಮಾಡಿ ಕಾನೂನು ಪುಕಾರ ಸೂಕ್ತ ಆದೇಶ ಹೊರಡಿಸಬೇಕು. ತಪ್ಪಿದರೆ ಸಕ್ಷಮ ಪ್ರಾಧಿಕಾರವು ಗ್ರೂಪ್-ಸಿ ಉದ್ಯೋಗಕ್ಕೆ ನೀಡುವ ವೇತನವನ್ನು ಅರ್ಜಿದಾರನಿಗೆ ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.