ಎಂಎಸ್ಪಿ ಗ್ಯಾರಂಟಿ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ: ಸಿಎಂಗೆ ಮನವಿ ಕೊಟ್ಟ ರೈತ ಮುಖಂಡರು

ಬೆಂಗಳೂರು: ವಿವಿಧ ರಾಜ್ಯಗಳ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯತರ) ಸಂಘಟನೆಯ ರೈತ ಜಾಗೃತಿ ಯಾತ್ರೆಯ ಉದ್ದೇಶ ವಿವರಿಸಿ ರಾಜ್ಯ ಸರ್ಕಾರದಿಂದ ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಎಂಎಸ್ಪಿ ಗ್ಯಾರಂಟಿ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುವಂತೆ ಹಾಗೂ ಭಾರತ ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಲು ಒತ್ತಾಯಿಸಲಾಯಿತು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯತರ) ಸಂಘಟನೆಯ ರೈತ ಜಾಗೃತಿ ಯಾತ್ರೆಯ ಮುಖಂಡರು ನಿನ್ನೆ ಗುರುವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ವೇಳೆ ಮನವಿ ಪತ್ರ ಸ್ವೀಕರಿಸಿದ ನಂತರ ಮಾತನಾಡಿದ ಸಿಎಂ ಸಚಿವ ಸಂಪುಟದ ಸದಸ್ಯರ ಜತೆ ಚರ್ಚೆ ಮಾಡಿ ಒಂದು ವಾರದಲ್ಲಿ ತೀರ್ಮಾನ ತಿಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ದೆಹಲಿ ಗಡಿಯಲ್ಲಿ 133 ದಿನ ಉಪವಾಸ ನಡೆಸಿದ ಎಸ್‌ಕೆಎಂ (ರಾಜಕೀಯತರ) ರಾಷ್ಟ್ರೀಯ ನೇತಾರ ಜಗಜಿತ್ ಸಿಂಗ್ ಧಲೇವಾಲ ಅವರು ವಿವರಿಸಿ ಸರ್ವೋಚ್ಚ ನ್ಯಾಯಾಲಯ ರಚಿಸಿದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನವಾಬ್ಸಿಂಗ್ ಸಮಿತಿಯು ರೈತ ಪರವಾಗಿ ವರದಿ ನೀಡಿದೆ.
ಕಳೆದ ವರ್ಷ ದೆಹಲಿ ಗಡಿಯಲ್ಲಿ ಚಳವಳಿ ನಡೆಸಿದಾಗ ಕೇಂದ್ರ ಸರ್ಕಾರ 5 ಸಭೆಯನ್ನು ನಡೆಸಿತ್ತು. ಕೇಂದ್ರ ಸಚಿವ ಪಿಯೂಸ್ ಗೋಯಿಲ್ ಅವರು 5 ಕೃಷಿ ಉತ್ಪನ್ನಗಳಿಗೆ ಖಾತರಿ ಕೊಡುತ್ತೇನೆ ಎಂದು ಹೇಳಿದ್ದರೂ ನಾವು ಒಪ್ಪಲಿಲ್ಲ ಎಂದು ಎಸ್‌ಕೆಎಂ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಇನ್ನು 31 ಜನರ ಸಂಸದೀಯ ಸಮಿತಿ ಸರ್ಕಾರಕ್ಕೆ ವರದಿ ಕೊಟ್ಟಿದೆ ಎಂಎಸ್‌ಪಿ ಗ್ಯಾರಂಟಿ ಕಾನೂನು ಅವಶ್ಯಕತೆ ಇದೆ ಎಂದು ವರದಿ ನೀಡಿದೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಡಾ. ಸ್ವಾಮಿನಾಥನ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು ಈ ವರದಿ 2007ರಲ್ಲಿ ಸಲ್ಲಿಸಲಾಗಿತ್ತು. 2014ರಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರುವ ಭರವಸೆ ನೀಡಿ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದರು. ನಂತರ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ.
ಹೀಗಾಗಿ ಸರ್ಕಾರವನ್ನು ಎಚ್ಚರಿಸಲು ದೇಶಾದ್ಯಂತ ರೈತ ಜಾಗೃತಿ ಯಾತ್ರೆ ಮಾಡುತ್ತಿದ್ದೇವೆ ಹಳ್ಳಿ ಹಳ್ಳಿಗಳಲ್ಲಿ ರೈತರಿಂದ ಸಹಿ ಸಂಗ್ರಹಿಸುತ್ತಿದ್ದು, ಸಹಿ ಸಂಗ್ರಹ ಪತ್ರ ಸ್ವೀಕರಿಸಿ ಮಾ.19 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರೈತರ ಸಮಾವೇಶ ನಡೆಸಿ ಪ್ರಧಾನಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ರೈತ ಮುಖಂಡರಾದ ಹರಿಯಾಣದ ಅಭಿಮನ್ಯು ಕೋಹರ್. ರೈತ ಮುಖಂಡರಾದ ಉತ್ತರ ಪ್ರದೇಶದ ನಿತಿನ್ ಬಾಲ್ಯನ್, ರಾಜಸ್ತಾನದ ಇಂದ್ರಜಿತ್ ಪಲ್ಲಿವಾನ್, ಮಧ್ಯಪ್ರದೇಶದ ಲೀಲಾಧರ್ ರಜಪೂತ್, ಅರುಣ್ ಪಟೇಲ್, ಪಂಜಾಬ್ ಹರ್ಸುಲಿಂದರ್ ಸಿಂಗ್, ಕರ್ನಾಟಕದ ಅತ್ತಹಳ್ಳಿ ದೇವರಾಜ್,
ಬರಡನಪುರ ನಾಗರಾಜ್, ರವಿಕುಮಾರ್ ಮುಂತಾದವರು ಇದ್ದರು.
Related









