ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಇಂದು ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ (79) ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅನಾರೋಗ್ಯದ ಕಾರಣ ಮುಷರಫ್ ಕಳೆದ ಎರಡು ವಾರಗಳಿಂದ ದುಬೈನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ಪರ್ವೇಜ್ ಮುಷರಫ್ ಅವರು 1999 ರಿಂದ 2008 ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಪರ್ವೇಜ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಯಿತು ಮತ್ತು 2007 ರಲ್ಲಿ ಪಾಕಿಸ್ತಾನದಲ್ಲಿ ಸಾಂವಿಧಾನಿಕ ತುರ್ತು ಪರಿಸ್ಥಿತಿಯನ್ನು ಬಲವಂತವಾಗಿ ಹೇರಲಾಗಿತ್ತು ಮತ್ತು ದೇಶದ್ರೋಹ ಆರೋಪ ಹೊರಿಸಲಾಗಿತ್ತು. ಈ ಸಂಬಂಧ ನವೆಂಬರ್ 19 ರಂದು ವಿಚಾರಣೆ ನಡೆದ ನಂತರ ಶಿಕ್ಷೆಯನ್ನು ಕಾಯ್ದಿರಿಸಲಾಯಿತು. ಬಳಿಕ ಡಿಸೆಂಬರ್ 17 ರಂದು ತೀರ್ಪು ಪ್ರಕಟವಾಗಿತ್ತು.
ಅವರು ಸೇನಾ ಮುಖ್ಯಸ್ಥರಾಗಿದ್ದರು ಮತ್ತು 1999 ರಲ್ಲಿ ಆಗಿನ ಪ್ರಧಾನಿ ನವಾಜ್ ಷರೀಫ್ ವಿರುದ್ಧ ರಕ್ತಪಾತ ರಹಿತ ದಂಗೆ ನಡೆಸುವ ಮೂಲಕ ಅಧಿಕಾರವನ್ನು ಕಿತ್ತುಕೊಂಡಿದ್ದರು. ನಂತರ ಅವರು 2001 ರಿಂದ 2008 ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಅವರು ಭಾರತದ ವಿರುದ್ಧ ಕಾರ್ಗಿಲ್ ಯುದ್ಧವನ್ನು ಪ್ರಾರಂಭಿಸಿದರು ಮತ್ತು ಮುಖಭಂಗ ಅನುಭವಿಸಿದ್ದರು.