ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ
247 ಕಾರ್ಮಿಕರೆಲ್ಲರೂ ಸ್ಫೋಟದಿಂದ ನೆಲದಡಿ ಸಿಲುಕಿದ್ದು ಅವರಲ್ಲಿ ಹೆಚ್ಚಿನವರನ್ನು ಶನಿವಾರ ಬೆಳಗ್ಗೆ ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಗಿದೆ. ಆದರೆ, ಈ ಸ್ಫೋಟದಲ್ಲಿ 90 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ನಾಪತ್ತೆಯಾದ ಒಂಬತ್ತು ಜನರಿಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದಾರೆ

ಬೀಜಿಂಗ್: ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ (Coal Mine Explosion) ಕನಿಷ್ಠ 90 ಮಂದಿ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಇದು ಇತ್ತೀಚಿನ ವರ್ಷಗಳಲ್ಲಿ ಚಿನಾದಲ್ಲಿ ಸಂಭವಿಸಿದ ಅತಿದೊಡ್ಡ ಕೈಗಾರಿಕಾ ವಿಪತ್ತಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ನಿನ್ನೆ ಅಂದರೆ ಶುಕ್ರವಾರ ಸಂಜೆ 7:29 ಕ್ಕೆ ಸ್ಫೋಟ ಸಂಭವಿಸಿದೆ. ನೂರಾರು ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. ಶಾಂಕ್ಸಿಯ ಕಲ್ಲಿದ್ದಲು ಗಣಿಯಲ್ಲಿ ಘಟನೆಯ ಸಮಯದಲ್ಲಿ 247 ಕಾರ್ಮಿಕರು ಕರ್ತವ್ಯದಲ್ಲಿದ್ದರು ಎಂದು ವರದಿಯಾಗಿದೆ.
ಆ ವೇಳೆ ಇದ್ದ 247 ಕಾರ್ಮಿಕರೆಲ್ಲರೂ ಸ್ಫೋಟದಿಂದ ನೆಲದಡಿ ಸಿಲುಕಿದ್ದು ಅವರಲ್ಲಿ ಹೆಚ್ಚಿನವರನ್ನು ಶನಿವಾರ ಬೆಳಗ್ಗೆ ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಗಿದೆ. ಆದರೆ, ಈ ಸ್ಫೋಟದಲ್ಲಿ 90 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ನಾಪತ್ತೆಯಾದ ಒಂಬತ್ತು ಜನರಿಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಸ್ಫೋಟದಿಂದ ಗಾಯಗೊಂಡ 100 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸೂಕ್ತ ಚಿಕಿತ್ಸೆ ನೀಡುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಿಳಿಸಿದ್ದು, ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆದುವಂತೆ ನಿರ್ದೇಶನ ನೀಡಿದ್ದಾರೆ.
ಇನ್ನು ಎಲ್ಲ ಇಲಾಖೆಗಳು ಈ ಅವಘಡದಿಂದ ಪಾಠ ಕಲಿಯಬೇಕು. ಕೆಲಸದ ಸ್ಥಳದ ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಬೇಕು. ದುರಂತಗಳು ಸಂಭವಿಸದಂತೆ ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.
ಚೀನಾದ ಸ್ಥಳೀಯ ಮಾಧ್ಯಮಗಳ ಪ್ರಕಾರ, ಕಲ್ಲಿದ್ದಲು ಗಣಿಯನ್ನು ನಡೆಸುತ್ತಿರುವ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅನಿಲ ಸ್ಫೋಟದ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಗಣಿಯಲ್ಲಿ ಇಂಗಾಲದ ಮಾನಾಕ್ಸೈಡ್ – ಹೆಚ್ಚು ವಿಷಕಾರಿ, ವಾಸನೆಯಿಲ್ಲದ ಅನಿಲ ಹೆಚ್ಚಾಗಿ ಲೀಕ್ ಆಗಿದ್ದರಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಗೆ ಸಹಾಯ ಮಾಡಲು ಚೀನಾದ ತುರ್ತು ನಿರ್ವಹಣಾ ಸಚಿವಾಲಯವು ಆರು ರಕ್ಷಣಾ ತಂಡಗಳಿಂದ 345 ಸಿಬ್ಬಂದಿಯನ್ನು ಕಳುಹಿಸಿದೆ. ಚೀನಾದ ಬಡ ಪ್ರಾಂತ್ಯಗಳಲ್ಲಿ ಒಂದಾದ ಶಾಂಕ್ಸಿಯನ್ನು ದೇಶದ ಕಲ್ಲಿದ್ದಲು ಗಣಿಗಾರಿಕೆ ರಾಜಧಾನಿ ಎಂದು ಕರೆಯಲಾಗುತ್ತದೆ.
2000 ರ ದಶಕದ ಆರಂಭದಲ್ಲಿ, ಚೀನಾದ ಕಲ್ಲಿದ್ದಲು ಗಣಿಗಾರಿಕೆ ಉದ್ಯಮದಲ್ಲಿ ಮಾರಕ ಅಪಘಾತಗಳು ಸಾಮಾನ್ಯವಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಬಿಗಿಗೊಳಿಸಲಾಗಿದೆ, ಆದರೆ ಅಪಘಾತಗಳು ಇನ್ನೂ ಸಂಭವಿಸುತ್ತವೆ. 2023 ರಲ್ಲಿ, ಉತ್ತರ ಇನ್ನರ್ ಮಂಗೋಲಿಯಾ ಪ್ರದೇಶದಲ್ಲಿ ತೆರೆದ-ಪಿಟ್ ಕಲ್ಲಿದ್ದಲು ಗಣಿಯಲ್ಲಿ ಆಗಿದ್ದ ಕುಸಿತದಿಂದ 53 ಮಂದಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು.
2009 ರಲ್ಲಿ, ಈಶಾನ್ಯದ ಹೈಲಾಂಗ್ಜಿಯಾಂಗ್ ಪ್ರಾಂತ್ಯದ ಗಣಿಯಲ್ಲಿ ಸಂಭವಿಸಿದ ಸ್ಫೋಟವು 100 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಚೀನಾ ವಿಶ್ವದ ಅತಿ ದೊಡ್ಡ ಕಲ್ಲಿದ್ದಲು ಬಳಕೆದಾರ ಮತ್ತು ಅತಿ ಹೆಚ್ಚು ಹಸಿರುಮನೆ ಅನಿಲಗಳನ್ನು (greenhouse gases) ಹೊರಸೂಸುವ ದೇಶವಾಗಿದೆ, ಆದರೂ ಅದು ದಾಖಲೆಯ ವೇಗದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದುತ್ತಿದೆ.
Related









