ಧಾರವಾಡ: ಕೈಗಾರಿಕೆಗಳ ಸ್ಥಾಪಿಸಲು ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ ಎಂದು ತಮ್ಮ ಸರ್ಕಾರದ ವಿರುದ್ಧವೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಐಟಿ-ಬಿಟಿ ಇಲಾಖೆಯಡಿ ಆಯೋಜಿಸಿದ್ದ ಬಿಯೋಂಡ್ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಜನೆಯ ವಿಚಾರ ಕೇವಲ ಭಾಷಣಕ್ಕೆ ಸೀಮಿತವಾಗುತ್ತಿದೆ. ಕಾರ್ಯಕ್ರಮಗಳು ಅನುಷ್ಠಾನ ಆಗುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇನ್ನು ಫಿಲ್ಡ್ ನಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೈಗಾರಿಕಾ ಸ್ಥಾಪನೆಗೆ ಪೂರಕ ವಾತಾವರಣವನ್ನು ಕೇವಲ ಮಾತಿನಲ್ಲಿ ಮಾಡಿದರೆ ಆಗದು, ಆ ಕಾರ್ಯ ನಿಜವಾಗಲು ಆಗಬೇಕು ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿ ವಿರುದ್ಧ ಶೆಟ್ಟರ್ ಅಸಮಾಧಾನದ ಕಟುನುಡಿಗಳನ್ನಾಡಿದರು.
ವಿಶೇಷ ಹೂಡಿಕೆ ವಲಯ ಬಗ್ಗೆಯೂ ಘೋಷಣೆ ಆಗಿದೆ. ಅದು ಕೂಡ ಕಾರ್ಯಗತವಾಗಿಲ್ಲ. ಕೂಡಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಕಾರ್ಯಗತಗೊಳಿಸಿ. ಸಚಿವ ಅಶ್ವತ್ಥ್ ನಾರಾಯಣ ಈ ಕೆಲಸವನ್ನು ಮಾಡಬೇಕು. ಅದು ಬಿಟ್ಟು ಇಲ್ಲದಕ್ಕೆ ಮೂಗು ತೂರಿಸಲು ಮುಂದಾಗಬಾರದು ಎಂದು ಹೇಳಿದರು.
ಕಿತ್ತೂರು ಬಳಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ಸ್ಥಾಪಿಸುವುದಾಗಿ ಸಚಿವರು ಹೇಳಿದ್ದರು. ಇದು ಸಾಧ್ಯನಾ? ಯಾವುದಾದರು ತಂಡ ಭೇಟಿ ನೀಡಿದೆಯಾ? ಭೂಮಿ ಮಂಜೂರು ಮಾಡಲು ಎರಡು ಮೂರು ವರ್ಷಗಳಾಗುತ್ತಿದೆ. ಏರ್ಪೋರ್ಟ್ ಸಾಧ್ಯತೆ ಬಗ್ಗೆ ಈವರೆಗೂ ಚರ್ಚೆ ಆಗಿದೆಯಾ ಎಂದು ಶೆಟ್ಟರ್ ಪ್ರಶ್ನಿಸಿದರು. ನಾನು ಸಿಎಂ ಆದಾಗ, ಇನ್ಫೋಸಿಸ್ಗೆ ಜಾಗ ನೀಡಿದ್ದೆ. ಆದರೇ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿಲ್ಲ ಎಂದರು.
ಕೇಂದ್ರ ಸಚಿವ ಜೋಶಿ ಮಾತನಾಡಿ, ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬದಲಾವಣೆಯಾಗುತ್ತಿದೆ. ಬಿಯಾಂಡ್ ಬೆಂಗಳೂರಿಗೆ ಪ್ರಚಾರ ಕೊಡಬೇಕಿದೆ. ಅದೇ ರೀತಿ ಅಂಕೋಲಾ ರೇಲ್ವೆ ವಿಚಾರದಲ್ಲೂ ಜನರು ಕೋರ್ಟ್ ಮೊರೆ ಹೋಗಿದ್ದಾರೆ. ನಾವು ಅಂಕೋಲಾ ರೈಲ್ವೆಗೆ ಪ್ರಯತ್ನ ನಡೆಸಿದ್ದೇವೆ. ನಾನು ಅದಕ್ಕಾಗಿ ದೆಹಲಿಯಿಂದ ಬಂದಿದ್ದು ಎಂದು ಹೇಳಿದರು.