ಕಲಬುರಗಿ: ಸಾರಿಗೆ ನೌಕರರ ಜಾಗೃತಿ ಸಮಾವೇಶ- ನೂರಾರು ನೌಕರರು ಭಾಗಿ
ಕಲಬುರಗಿ: ರಾಜ್ಯ ಸಾರಿಗೆ ನಿಗಮಗಳ ವೇತನ ಪರಿಷ್ಕರಣೆ ಸೇರಿದಂತೆ ಇತರ ಬೇಡಿಕೆಗಳ ಈಡೆರಿಕೆಗೆ ಕೂಡಲೇ ಸರ್ಕಾರ ಸಾರಿಗೆ ಸಂಘಟನೆಗಳ ಸಭೆ ಕರೆಯಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿ ಇಂದು ಕಲಬುರಗಿಯಲ್ಲಿ ಬೃಹತ್ ರ‍್ಯಾಲಿ ನಡೆಸುವ ಮೂಲಕ ನೌಕರರ ಜಾಗೃತಿ ಸಮಾವೇಶ ಆಯೋಜಿಸಿದೆ.
ಸಮಾವೇಶಕ್ಕೂ ಮುನ್ನಾ ನೂರಾರು ನೌಕರರು ಸಮಾವೇಶ ಸ್ಥಳದವರೆಗೂ ಪಾದಯಾತ್ರೆ ನಡೆಸಿದರು. ಈ ವೇಳೆ ವೇತನ ಪರಿಷ್ಕರಣೆ ಆಗಲೇಬೇಕು, ವಜಾಗೊಳಿಸಿರುವ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಘೋಷಣೆ ಕೂಗಿದರು.
ಕ್ರಿಯಾಸಮಿತಿಯ ಪದಾಧಿಕಾರಿಗಳು, ಈ ಸಂಬಂಧ ಇದೇ ಇದೇ ಅ.11 ರಂದು (ಮಂಗಳವಾರ) ಬೆಂಗಳೂರಿನ ಶೇಷಾದ್ರಿಪುರಂನ ಗುಂಡೂರಾವ್ ಸಭಾಂಗಣದಲ್ಲಿ ಸಮಾವೇಶ ಹಮ್ಮಿಕೊಂಡಿದ್ದರು. ಅದರ ಮುಂದುವರಿದ ಭಾಗವಾಗಿ ಇಂದು (ಗುರುವಾರ ಅ.20) ಕಲಬುರಗಿಯಲ್ಲಿ ಸಮಾವೇಶ ಆಯೋಜಿಸಿದೆ.
ಸಮಾವೇಶದಲ್ಲಿ ತೆಗೆದುಕೊಂಡು ನಿರ್ಣಯಗಳು: ಈಗಾಗಲೇ ಸಾರಿಗೆ ನೌಕರರ ವೇತನ ಹೆಚ್ಚಳದ ವಿಷಯ ಸುಮಾರು 33 ತಿಂಗಳುಗಳಿಂದ ಚರ್ಚೆಯಾಗುತ್ತಿದೆ. ಅದರಿಂದ ನೌಕರ ವರ್ಗದಲ್ಲಿ ಸಾಕಷ್ಟು ಆಶಾಂತಿ ಮೂಡಿದೆ. ನಾವು 02/09/2022 ರಂದು ಪತ್ರ ಮೂಲಕ ಈ ವಿಷಯದಲ್ಲಿ ಮುಖ್ಯ ಮಂತ್ರಿಯವರ ಗಮನ ಸೆಳೆದಿದ್ದೇವೆ.
ಅವರ ಜತೆ ಚರ್ಚಿಸಲು ಸಮಯ ಕೇಳಿದ್ದೇವೆ. ಇಲ್ಲಿಯವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಅಥವಾ ಮಾತುಕತೆ ನಡೆಸುವಂತೆ ಸಾರಿಗೆ ನಿಗಮಗಳಿಗೆ ಆದೇಶ ಬಂದಿಲ್ಲ. ಆದ್ದರಿಂದ ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುವ 6 ಸಂಘಟನೆಗಳು ಜಂಟಿ ಕ್ರಿಯಾ ಸಮಿತಿಯನ್ನು ರಚಿಸಿ, ಬೇಡಿಕೆಗಳ ಇತ್ಯರ್ಥಕ್ಕೆ ಚಳವಳಿ ರೂಪಿಸಲು ತೀರ್ಮಾನಿಸಿವೆ.
ಈ ದೃಷ್ಟಿಯಿಂದ ಪ್ರಥಮ ಹಂತವಾಗಿ ರಾಜ್ಯಾದ್ಯಂತ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರ ಮೂರು ಸಮಾವೇಶಗಳನ್ನು ಬೆಂಗಳೂರು, ಕಲ್ಬುರ್ಗಿ ಮತ್ತು ಹುಬ್ಬಳ್ಳಿಯಲ್ಲಿ ನಡೆಸಲು ತೀರ್ಮಾನಿಸಿರುವಂತೆ ಇಂದು ಎರಡನೇಯ ಸಮಾವೇಶ ಕಲಬುರಗಿಯಲ್ಲಿ ನಡೆಯುತ್ತಿದ್ದು, ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ.
ಇಂದು ಬೆಲೆ ಏರಿಕೆ ಮತ್ತಿತರ ಕಾರಣಗಳಿಂದ ಸಾರಿಗೆ ನಿಗಮಗಳ ನೌಕರರು ಜೀವನ ನಡೆಸುವುದೇ ಕಷ್ಟವಾಗಿದೆ. ನಾವು ನಮ್ಮ ಜಂಟಿ ಕ್ರಿಯಾ ಸಮಿತಿ ವತಿಯಿಂದ 10 ಅಂಶಗಳ ಬೇಡಿಕೆಗಳ ಪ್ರಣಾಳಿಕೆಯನ್ನು 08.08.2022 ರಂದು ಸಾರಿಗೆ ನಿಗಮಗಳ ಆಡಳಿತ ವರ್ಗಕ್ಕೆ ಕೊಟ್ಟಿದ್ದೇವೆ. ವೇತನ, ಬಾಟ ಇತ್ಯಾದಿಗಳ ಹೆಚ್ಚಳ, ಉತ್ತಮ ವೈದ್ಯಕೀಯ ಸೌಲಭ್ಯ, ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿಗದಿ ಪಡಿಸುವುದು (ಫಾರಂ-4).
ಮಹಿಳಾ ನೌಕರರಿಗೆ ಸಂಬಂಧಪಟ್ಟ ಬೇಡಿಕೆಗಳು, ಉತ್ತಮವಾದ ಪೆನ್ಶನ್, ಕೈಗಾರಿಕಾ ಒಪ್ಪಂದಗಳಂತೆ ಗ್ರಾಚ್ಯುಟಿ ಕೊಡುವುದು ಹಾಗೂ ಮುಷ್ಕರದ ಸಂದರ್ಭದಲ್ಲಿ ವಜಾ ಆಗಿರುವ ಎಲ್ಲ ನೌಕರರನ್ನು ಬೇಷರತ್ತಾಗಿ ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳುವುದು ಮುಂತಾದ ಬೇಡಿಕೆಗಳ ಈಡೇರಿಸಬೇಕು ಎಂದು ಕೆ.ಎಸ್.ಆರ್.ಟಿ.ಸಿ ಆಡಳಿತ ವರ್ಗಕ್ಕೆ ಆಗ್ರಹಿಸಿದೆ.
ಇನ್ನು ಈ ಹಿಂದೆ ಸರ್ಕಾರದಿಂದ ಸೂಚನೆ ಬಂದ ನಂತರ ನಮ್ಮೊಡನೆ ಮಾತುಕತೆ ನಡೆಸುವ ಆಶ್ವಾಸನೆ ಕೊಟ್ಟಿದ್ದರು. ಆದರೆ, ಈವರೆಗೂ ನಮ್ಮ ಸಮಿತಿಗೆ ಆಡಳಿತ ವರ್ಗದಿಂದ ಯಾವುದೇ ಆಹ್ವಾನ ಬಂದಿಲ್ಲ. ಹೀಗಾಗಿ ಜಂಟಿ ಸಮಿತಿಯು ವಾಯವ್ಯ ಮತ್ತು ಈಶಾನ್ಯ ನಿಗಮಗಳಲ್ಲಿ ಗುತ್ತಿಗೆ ಪದ್ಧತಿಯ ಮೂಲಕ ಸಿಬ್ಬಂದಿಗಳನ್ನು ನೇಮಿಸುವುದನ್ನು ನಿಲ್ಲಿಸಬೇಕು. ಅದೇ ರೀತಿಯಲ್ಲಿನಿಗಮಗಳಿಗೆ ಸೇರಿರುವ 41 ಮಾರ್ಗಗಳನ್ನು ಖಾಸಗಿಯವರಿಗೆ ಕೊಡುವುದನ್ನು ರದ್ದು ಮಾಡಬೇಕೆಂದು ಸಮಾವೇಶದಲ್ಲಿ ಜಂಟಿ ಸಮಿತಿ ಒತ್ತಾಯಿಸಿದೆ.
ಸಮಾವೇಶದಲ್ಲಿ ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ವರ್ಕರ್ಸ್ ಫಡರೇಷನ್‌ನ ವಿಜಯಭಾಸ್ಕರ.ಡಿ.ಎ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳದ ಬಿ.ಜಯದೇವರಾಜೇಅರಸ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿ.ಐ.ಟಿ.ಯು)ನ ಎಚ್.ಡಿ. ರೇವಪ್ಪ, ಕೆ.ಎಸ್. ಆರ್.ಟಿ.ಸಿ & ಬಿಎಂಟಿಸಿ ಯುನೈಟೆಡ್’ ಎಂಪ್ಲಾಯೀಸ್ ಯೂನಿಯನ್‌ನ ಕೆ.ಆರ್. ವಿಜಯಕುಮಾರ್, ಕೆ.ಎಸ್.ಆರ್.ಟಿ.ಸಿ ಎಸ್.ಸಿ & ಎಸ್.ಟಿ ಎಂಪ್ಲಾಯೀಸ್ ಯೂನಿಯನ್‌ನ ವೆಂಕಟರಮಣಪ್ಪ, ಕ.ರಾ.ರ.ಸಾ ಸಂಸ್ಥೆ ಪ.ಜಾ/ಪ.ಪಂ ಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಎಂ. ಮಲ್ಲಿಕಾರ್ಜುನ ಮೂರ್ತಿ ಮತ್ತು ಬಿಎಂಎಸ್‌ನ ಮಹದೇವಯ್ಯ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದಾರೆ.