ಲಿಂಗಸುಗೂರು: ‘ಕಲ್ಯಾಣ ಕರ್ನಾಟಕ ವಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಘಟಕಗಳಲ್ಲಿ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಸಿಬ್ಬಂದಿ ಬಸವಳಿದಿದ್ದಾರೆ. ಹೀಗಾಗಿ ಸಂಸ್ಥೆಯಲ್ಲಿನ ಪ್ರಜಾತಂತ್ರ ಗಟ್ಟಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅಚರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿ, ‘ಸಾರಿಗೆ ಘಟಕದಲ್ಲಿ ಅಧಿಕಾರಿಗಳು, ಸಂಸ್ಥೆ ನಿಯಮಗಳನ್ನು ಗಾಳಿಗೆ ತೂರಿ ಸಿಬ್ಬಂದಿ ಮೇಲೆ ಸರ್ವಾಧಿಕಾರ ಮೆರೆಯುತ್ತಿದ್ದಾರೆ. ರಜೆ ಕೇಳಿದರೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. “ಸಾಂದರ್ಭಿಕ ರಜೆ ನಿಯಮಾನುಸಾರ ನೀಡದೆ ಹಿಂಸೆ ಜೊತೆಗೆ ಇಲ್ಲದ ಆರೋಪ ಮಾಡುತ್ತಿದ್ದಾರೆ.
ಸೇವೆಯ ಹಿರಿತನದ ಮೇರೆಗೆ ಬಸ್ ರೂಟ್ ನೀಡುವಂತೆ ಕೇಳಿದರೆ ಮಾನಸಿಕ ಹಿಂಸೆ ನೀಡುವ ಜತೆಗೆ ನೋಟಿಸ್, ಅಮಾನತು ಶಿಕ್ಷೆ ನೀಡುತ್ತಾರೆ. ಇದಿಷ್ಟೇ ಅಲ್ಲದೆ ದಂಡ ಕಟ್ಟಬೇಕಿದೆ. ಎಲ್ಲದಕ್ಕೂ ಹಣದ ಬೇಡಿಕೆ ಇಡುತ್ತಿರುವ ಕಾರಣ ನೌಕರರು ಬೇಸತ್ತಿದ್ದಾರೆ. ಕರ್ತವ್ಯದ ರಿಜಿಸ್ಟರ್ ಬುಕ್‌ನಲ್ಲಿ ಒಬ್ಬರ ಹೆಸರಿದ್ದರೆ, ರೂಟ್ ಮೇಲೆ ಬೇರೆಯವರನ್ನು ಕಳಿಯುತ್ತಿದ್ದಾರೆ ಈ ಅಧಿಕಾರಿಗಳು.
ಈ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕಾದರೆ ಎರಡು ವರ್ಷಗಳ ಚಾಲಕ, ನಿರ್ವಾಹಕ ಮತ್ತು ಚಾಲಕ ಕಂ. ನಿರ್ವಾಹಕರ ರಿಜಿಸ್ಟರ್ ಸೇರಿದಂತೆ ಇತರ ದಾಖಲೆ ಪರಿಶೀಲಿಸಿದರೆ ಈ ಸತ್ಯ ಬಯಲಿಗೆ ಬರಲಿದೆ ಎಂದು ಸಚಿವ ಗಮನ ಸೆಳೆದರು.
ಇನ್ನು ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಕೆಲ ನೌಕರರು ದುರ್ಮರಣ ಹೊ೦ದಿದ ಸಾಕ್ಷಿಗಳು ಕೂಡ ಇವೆ. ಸಾರಿಗೆ ಘಟಕದಲ್ಲಿ ಬಸ್ ತೊಳೆಯುವ ಹಾಗೂ ಬಸ್ ಒಳಗಡೆ ಸ್ವಚ್ಛಗೊಳಿಸುವ ಸಿಬ್ಬಂದಿ ಇಲ್ಲ. ಹೀಗಾಗಿ ಘಟಕದಲ್ಲಿ ಆ ಹಣ ದುರ್ಬಳಕೆ ನಡೆಯುತ್ತಿದೆ. ಸಿಬ್ಬಂದಿ ಕರ್ತವ್ಯ ನಿರ್ವ ಹಿಸಲು ಲಂಚ ನೀಡಬೇಕು. ಲಂಚ ಸ್ವೀಕರಿಸುವ ಸಲುವಾಗಿಯೇ ಕೆಲ ಸಿಬ್ಬಂದಿಗಳನ್ನು ನೇಮಕ ಮಾಡಿದಂತಾಗಿದೆ. ನೇರ ಹಣ ನೀಡಬೇಕು, ಇಲ್ಲವಾದಲ್ಲಿ ಸಂಬಂಧಿಗಳ, ಸ್ನೇಹಿತರ ಮೊಬೈಲ್ ಸಂಖ್ಯೆಗೆ ಹಣ ಪಾವತಿಸುವ ಅನಿವಾರ್ಯತೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಸ್ಥಳೀಯ ಘಟಕಕ್ಕೆ ಹೆಚ್ಚುವರಿ ಹೊಸ ಬಸ್‌ಗಳನ್ನು ನೀಡಬೇಕು. ಜತೆಗೆ ಹೆಚ್ಚಿನ ವಸತಿ ಗೃಹಗಳ ನಿರ್ಮಾಣ ಮಾಡುವ ಮೂಲಕ ನೌಕರರಿಗೆ ಅನುಕೂಲ ಮಾಡಿಕೊಡಬೇಕು. ಇನ್ನು ನೌಕರರ ಮೇಲೆ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದರು.
ದಸಂಸ ರಾಜ್ಯ ಸಮಿತಿ ಸದಸ್ಯ ಪ್ರಭುಲಿಂಗ ಮೇಗಳಮನಿ, ತಾಲೂಕು ಘಟಕದ ಸಂಚಾಲಕ ಯಲ್ಲಪ್ಪ ಹಾಲಭಾವಿ, ಸಾಮಾಜಿಕ ಜಾಲತಾಣ ಅಧ್ಯಕ್ಷ ಅಕ್ರಂಪಾಷಾ, ಮುಖಂಡರಾದ ಹುಸೇನಪ್ಪ ತರಕಾರಿ, ಹನುಮೇಶ ಕುಪ್ಪಿಗುಡ್ಡ ಇದ್ದರು.