ಕುಷ್ಟಗಿ: ಕೊಪ್ಪಳ- ಕುಷ್ಟಗಿ ಮಾರ್ಗಮಧ್ಯದ ಕುದುರಿಮೋತಿ ಕ್ರಾಸ್ ಬಳಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಕಳೆದ ಜನವರಿ 31ರಂದು 8 ಜನರಿದ್ದ ವಿದ್ಯಾರ್ಥಿಗಳ ಗುಂಪು ಹಲ್ಲೆ ಮಾಡಿದ ಘಟನೆ ಜರುಗಿತ್ತು.
ಹಲ್ಲೆಯಲ್ಲಿ ಕುಷ್ಟಗಿ ಘಟಕದ ನೌಕರರಾದ ಚಾಲಕ ಹನುಮಂತಗೌಡ ಮತ್ತು ನಿರ್ವಾಹಕ ರಾಜಸಾಬ್ ಎಂಬುವರು ಗಾಯಗೊಂಡಿದ್ದು ಈ ಇಬ್ಬರನ್ನು ಕುಷ್ಟಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ನಡುವೆ ವಿಷಯ ತಿಳಿದ ಕೂಡಲೇ ಕೆಕೆಆರ್‌ಟಿಸಿ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ವೆಂಕಟೇಶ್, ಡಿಟಿಒ ಆರ್.ಬಿ.ಜಾದವ್ ಮತ್ತು ಕುಷ್ಟಗಿ ಘಟಕ ವ್ಯವಸ್ಥಾಪಕ ಜೆ.ಬಿ. ಜಡೇಶ ಅವರು ನೌಕರರ ಮನೆಗೇ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಸಾರಿಗೆ ಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ತಮ್ಮ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಸಾರ್ವಜನಿಕರಿಂದ ಹಲ್ಲೆಗೊಳಗಾದ ಕೂಡಲೇ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ವೆಂಕಟೇಶ್, ಡಿಟಿಒ ಆರ್.ಬಿ.ಜಾದವ್ ಮತ್ತು ಕುಷ್ಟಗಿ ಘಟಕ ವ್ಯವಸ್ಥಾಪಕ ಜೆ.ಬಿ. ಜಡೇಶ ಅವರು ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.
ಈ ಅಧಿಕಾರಿಗಳಂತೆ ಸಮಸ್ಯೆಗೆ ಅಥವಾ ಹಲ್ಲೆಗೊಳಗಾದ ನೌಕರರನ್ನು ಭೇಟಿ ಮಾಡಿ ಅವರ ನೋವನ್ನು ಪ್ರತಿಯೊಬ್ಬ ಅಧಿಕಾರಿಯೂ ಆಲಿಸಿದರೆ ಸಾರಿಗೆ ಸಂಸ್ಥೆಗಳು ಮಾದರಿಯಾಗಲಿವೆ. ಅಲ್ಲದೆ ನೌಕರರಿಗೂ ಸಮಾಧಾನವಾಗಲಿದೆ ಎಂದು ಅಧಿಕಾರಿಗಳು ಹಲ್ಲೆಗೊಳಗಾದವರನ್ನು ಭೇಟಿ ಮಾಡಿರುವುದಕ್ಕೆ ನೌಕರರು ಒಂದುರೀತಿ ಭಾವನಾತ್ಮಕ ಬಾಂಧವ್ಯದ ಖುಷಿ ಹಂಚಿಕೊಂಡಿದ್ದಾರೆ.
ಕುದುರಿಮೋತಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಂದ ನಮ್ಮ ಸಿಬ್ಬಂದಿಗಳಾದ ಹನುಮಗೌಡ ಮತ್ತು ರಾಜಸಾಬ್ ಅವರ ಮೇಲೆ ಹಲ್ಲೆಯಾಗಿದ್ದು ಮತ್ತು ಹಲ್ಲೆ ಮಾಡಿದ ವಿದ್ಯಾರ್ಥಿಗಳ ಮೇಲೆ ಕೇಸ್ ದಾಖಲಾಗಿದೆ. ಈ ಪ್ರಕರಣ ಸಂಬಂಧ ನಮ್ಮ ವಿಭಾಗದ DC ಸಾಹೇಬರು ಹಾಗೂ DTO ಸಾಹೇಬರು ಮತ್ತು ಘಟಕ ವ್ಯವಸ್ಥಾಪಕರು ನಮ್ಮ ಸಹೋದ್ಯೋಗಿಗಳ ಮನೆಗೆ ಭೇಟಿಕೊಟ್ಟು ಅವರ ಆರೋಗ್ಯ ವಿಚಾರಿಸಿದ್ದಾರೆ.
ಅಲ್ಲದೆ ನಮ್ಮ ನೌಕರರಿಗೆ ಇಲಾಖೆ ವತಿಯಿಂದ ಏನೆಲ್ಲ ಸಹಾಯ ಬೇಕು ಅದೆಲ್ಲ ನಾವು ಮಾಡ್ತೀವಿ ಅಂತ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ. ಹೀಗಾಗಿ ಕುಷ್ಟಗಿ ಘಟಕ ಹಾಗೂ ಕೊಪ್ಪಳ ವಿಭಾಗದ ಎಲ್ಲ ನೌಕರರು ಈ ನಮ್ಮ ಅಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಘಟನೆ ವಿವರ: ಕಳೆದ ಜ.31ರಂದು ಬಸ್ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದವವರನ್ನು ಒಳಗಡೆ ಬನ್ನಿ ಎಂದು ನಿರ್ವಾಹಕರು ಕರೆದಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡು ಕುದುರಿಮೋತಿ ಹತ್ತಿರ ಬಸ್ ಬರುತ್ತಿದ್ದಂತೆ ಏಕಾಏಕಿ ಬಂದು ಹಲ್ಲೆ ಮಾಡಿದ್ದರು.
ಹಲ್ಲೆಯಿಂದ ನೌಕರರ ಕೈ ಮತ್ತು ಮುಖ ಸೇರಿದಂತೆ ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿದ್ದವು. ಮೊಣಕೈ ಮುರಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಹಲ್ಲೆ ಸಂಬಂಧ ಕುಷ್ಟಗಿ ವಿಭಾಗೀಯ ಅಧಿಕಾರಿಗಳು ಬೇವೂರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.