KSRTC: ಅಧಿಕ ಪಿಂಚಣಿ ಸಂಬಂಧ ಎಂಡಿ ಜತೆ ಚರ್ಚೆ- ಶೀಘ್ರ ಪರಿಹಾರದ ಭರವಸೆ ಕೊಟ್ಟ ಅನ್ಬುಕುಮಾರ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನಿವೃತ್ತ ನೌಕರರ ಅಧಿಕ ಪಿಂಚಣಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್ಆರ್ಟಿಸಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಂಘದ ಪದಾಧಿಕಾರಿಗಳು ಒಟ್ಟಾಗಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ಅವರ ಕಚೇರಿಯಲ್ಲಿ ಗುರುವಾರ ಭೇಟಿ ಮಾಡಿ, ಸಂಸ್ಥೆಯ ನಿವೃತ್ತ ನೌಕರರ ಅಧಿಕ ಪಿಂಚಣಿಗೆ ಸಂಬಂಧ ಸುದೀರ್ಘ ಚರ್ಚೆ ನಡೆಸಿದರು.
ಭೇಟಿ ವೇಳೆ ಪದಾಧಿಕಾರಿಗಳನ್ನು ಬರಮಾಡಿಕೊಂಡ ಸಂಸ್ಥೆಯ ಮುಖ್ಯಸ್ಥರು, ಹರ್ಷ ವ್ಯಕ್ತಪಡಿಸಿ ತಾವೆಲ್ಲರೂ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದೀರಿ, ನಿವೃತ್ತಿಯ ನಂತರ ನಿಮ್ಮ ಕಷ್ಟ ಏನೆಂದು ನಮಗೆ ತಿಳಿದಿದೆ. ಹೀಗಾಗಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಂಡಿ ಭರವಸೆ ನೀಡಿದ್ದಾರೆ.
ಅಲ್ಲದೆ ನೀವು ಕೊಟ್ಟಿರುವ ಮನವಿಯನ್ನು ಪರಾಮರ್ಶಿಸಿದ, ನೌಕರರ ಸೇವಾ ವಿವರಗಳಲ್ಲಿ ಯಾವುದೇ ದೋಷವಿದ್ದಲ್ಲಿ ಅದನ್ನು ಸರಿಪಡಿಸಲು, ಸಂಸ್ಥೆಯ ವತಿಯಿಂದ ಸಿಬ್ಬಂದಿಯನ್ನು ನಿಯೋಜಿಸಿ, ಎರಡು ಕಂಪ್ಯೂಟರ್ ಸೆಂಟರ್ ತೆರೆಯಲಾಗುವುದು ಎಂದು ತಿಳಿಸಿದರು.
ಇನ್ನು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಶೀಘ್ರ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಪಿಎಫ್ಒ ಅಧಿಕಾರಿಗಳಿಗೆ ಕೂಡಲೇ ಪತ್ರ ಸಿದ್ಧಪಡಿಸುವಂತೆ ಹಾಗೂ ಮನವಿ ಪತ್ರಗಳ ಸಂಪೂರ್ಣ ವಿವರವನ್ನು ತಮಗೆ ಮಂಡಿಸುವಂತೆ ತಮ್ಮ ಆಪ್ತ ಕಾರ್ಯದರ್ಶಿಗೆ ನಿರ್ದೇಶಿಸಿದರು.
ಒಟ್ಟಾರೆ, ಸಂಸ್ಥೆಯ ಮುಖ್ಯಸ್ಥರ ಜತೆ ನಡೆದ ಚರ್ಚೆ ಅತ್ಯಂತ ಸೌಹಾರ್ತವಾಗಿದ್ದು, ಎಂಡಿ ಅವರಿಗೆ ನೀಡಿದ ಮನವಿ ಪತ್ರದಲ್ಲಿ ನಾವು ಸಂಸ್ಥೆಯಲ್ಲಿ ಸಲ್ಲಿಸಿದ ಸೇವೆ ಹಾಗೂ ಈವರವಿಗೂ ನಡೆಸಿದ ಹೋರಾಟದ ಪ್ರತಿಯೊಂದು ಅಂಶಗಳನ್ನು ಉಲ್ಲೇಖಿಸಿದ್ದು, ಅವುಗಳನ್ನು ಶೀಘ್ರ ಪರಿಹರಿಸುವಂತೆ ಮನವಿ ಮಾಡಲಾಗಿದೆ ಎಂದು ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಪದಾಧಿಕಾರಿಗಳಾದ ಶಂಕರ್ ಕುಮಾರ್, ಸುಬ್ಬಣ್ಣ, ಡೋಲಪ್ಪ, ಕೃಷ್ಣಮೂರ್ತಿ, ಜಿಎಸ್ಎಂ ಸ್ವಾಮಿ, ಕುಲಕರಣಿ, ವೀರಕುಮಾರ್ ಗಡದ್, ಬ್ರಹ್ಮಚಾರಿ, ವೇಲೂರು ಅಮರ್ ಇತರರು ಇದ್ದರು.