KSRTC ಆಡಳಿತ ವರ್ಗ- ಕಾರ್ಮಿಕ ಸಂಘಟನೆಗಳ ನಡುವೆ ಕೈಗಾರಿಕಾ ವಿವಾದ ಉದ್ಭವಿಸಿರುವ ಹಿನ್ನೆಲೆ ಡಿ.27ರಂದು ಸಂಧಾನ ಸಭೆ- ಇದೊಂದು ಹೈಡ್ರಾಮಾ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೇ ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಕೈ ಬಿಡುವ ಸಂಬಂಧ ಡಿ.27ರಂದು ಬೆಳಗ್ಗೆ 11.30ಕ್ಕೆ ಸಂಸ್ಥೆಯ ಆಡಳಿತ ಮಂಡಳಿ ಜತೆ ರಾಜೀ ಸಂಧಾನ ಸಭೆಯನ್ನು ಕಾರ್ಮಿಕ ಇಲಾಖೆ ಆಯುಕ್ತರು ನಿಗದಿಪಡಿಸಿದ್ದಾರೆ.
ಆಡಳಿತವರ್ಗದವರಾದ ವ್ಯವಸ್ಥಾಪಕ ನಿರ್ದೇಶಕರು, ಕೆ.ಎಸ್.ಆರ್.ಟಿ.ಸಿ / ಬಿ.ಎಂ.ಟಿ.ಸಿ / ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಮತ್ತು ಕೆ.ಕೆ.ಆರ್.ಟಿ.ಸಿ ಇವರು ವೇತನ ಪರಿಷ್ಕರಣೆ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು, ಡಿಸೆಂಬರ್31ರ ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿ.9 ರಂದು ಮುಷ್ಕರ ನೋಟಿಸ್ ನೀಡಿದೆ.
ವೇತನ ಪರಿಷ್ಕರಣೆ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು 31.12.2024 ರಂದು ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಜಂಟಿ ಕ್ರಿಯಾ ಸಮಿತಿ ಡಿ.9-2024 ರಂದು ಮುಷ್ಕರ ನೋಟಿಸ್ ನೀಡಿದೆ ಎಂದು KSRTC ನಿಗಮದ ಎಂಡಿ ಡಿ.16ರಂದು ಕಾರ್ಮಿಕ ಇಲಾಖೆಗೆ ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಕೋರಿದ್ದಾರೆ.
ಹೀಗಾಗಿ ಕಾರ್ಮಿಕ ಸಂಘದವರು, ಮುಷ್ಕರ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಆಡಳಿತವರ್ಗ ಮತ್ತು ಕಾರ್ಮಿಕ ಸಂಘದವರ ನಡುವೆ ಕೈಗಾರಿಕಾ ವಿವಾದ ಉದ್ಭವಿಸಿದೆ ಎಂದು ಪರಿಗಣಿಸಿ, ಈ ಸಂಬಂಧ ಮಧ್ಯೆ ಪ್ರವೇಶಿಸುವುದು ಅವಶ್ಯವೆಂದು ಭಾವಿಸಿ, ಇದೇ ಡಿ.27ರಂದು ಬೆಳಗ್ಗೆ 11.30ಕ್ಕೆ ರಾಜೀಸಂಧಾನ ಸಭೆಯನ್ನು ನಿಗದಿಪಡಿಸಿದೆ.
ಈ ಸಂಧಾನ ಸಭೆಗೆ ಆಡಳಿತವರ್ಗ ಮತ್ತು ಕಾರ್ಮಿಕ ಸಂಘದವರು ಹಾಜರಿರಬೇಕು ಎಂದು ತಿಳಿಸುತ್ತಿದ್ದೇವೆ ಎಂದು ಕಾರ್ಮಿಕ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಮಹಾ ನಾಟಕ ಮಂಡಳಿ: ಈ ಸಂಧಾನ ಸಭೆ ಎಂಬುವುದು ಒಂದು ಮಹಾ ನಾಟಕ ಮಂಡಳಿ ಇದ್ದಂತೆ. ಈ ಸಭೆಯಲ್ಲಿ ಕಾಫಿ, ಟೀ, ಬಿಸ್ಕತ್ ಸೇವಿಸಿ ಒಂದಷ್ಟು ಹರಟೆ ಹೊಡೆದುಕೊಂಡು ಹೊರಬರುವುದಕ್ಕಷ್ಟೇ ಸೀಮಿತವಾಗಿರುತ್ತದೆ. ಅದನ್ನು ಬಿಟ್ಟು ಸಾರಿಗೆ ನೌಕರರಿಗೆ ಆಗುತ್ತಿರುವ ವೇತನ ವ್ಯತ್ಯಾಸದ ಬಗ್ಗೆಯಾಗಲಿ ಅವರು ಅನುಭವಿಸುತ್ತಿರುವ ಸಮಸ್ಯೆಗಳಿಗಾಗಲಿ ಯಾವುದೆ ಪರಿಹಾರ ಸಿಗುವುದಿಲ್ಲ.
ಇದೆಲ್ಲ ಆಗುವುದಿಲ್ಲ ಎಂದ ಮೇಲೆ ಯಾರ ಮನವೊಲಿಸುವುದಕ್ಕಾಗಿ ಈ ಸಭೆ ಕರೆಯುತ್ತಾರೆ. ಕಾರ್ಮಿಕ ಇಲಾಖೆ ಇರುವುದು ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗೆ ಸಂಬಂಧಪಟ್ಟ ಆಡಳಿತ ಮಂಡಳಿಯಿಂದ ಪರಿಹಾರ ಕೊಡಿಸಬೇಕು. ಅದನ್ನು ಕೊಡಿಸುವುದಕ್ಕೆ ಈ ಕಾರ್ಮಿಕ ಇಲಾಖೆಯೆ ಆಯಕ್ತರಿಂದ ಸಾಧ್ಯವಿಲ್ಲ. ಕಾರಣ ಇವರೊಬ್ಬ ಸರ್ಕಾರಿ ಅಧಿಕಾರಿ. ನೌಕರರಿಗೆ ಪರಿಹಾರ ಕೊಡಬೇಕಿರುವುದು ಸರ್ಕಾರವೇ ಆಗಿರುವುದರಿಂದ ಈ ಆಯುಕ್ತರು ಸರ್ಕಾರಕ್ಕೆ ತಾಕೀತು ಮಾಡುವ ಧೈರ್ಯ ಮಾಡುವುದಿಲ್ಲ. ಏಕೆಂದರೆ ಅವರಿಗೆ ಆ ಅಧಿಕಾರವಿಲ್ಲ.
ಅದೇ ಒಂದು ಖಾಸಗಿ ಕಂಪನಿಯಾಗಿದ್ದರೆ ಅಲ್ಲಿ ಕಾರ್ಮಿಕರು ಮತ್ತು ಮಾಲೀಕರ ನಡುವೆ ಸಮಸ್ಯೆ ಇದ್ದರೆ ಈ ಆಯುಕ್ತರು ತಮ್ಮ ಅಧಿಕಾರ ಬಳಸಿ ಕಾರ್ಮಿಕರಿಗೆ ಸೌಲಭ್ಯ ಕೊಡಿಸಬಹುದು. ಆದರೆ ಇದು ಸರ್ಕಾರ ಮತ್ತು ನೌಕರರ ನಡುವೆ ನಡೆಯುತ್ತಿರುವ ಹೋರಾಟವಾಗಿರುವುದರಿಂದ ಈ ಆಯುಕ್ತರು ಇಲ್ಲಿ ಹಲ್ಲುಕಿತ್ತ ಹಾವಿನಂತೆ ಬುಟ್ಟಿಯೊಳಗೆ ಮಲಗುವ ಕೆಲಸ ಬಿಟ್ಟರೆ ಇನ್ನೇನನ್ನು ಮಾಡಲು ಬರುವುದಿಲ್ಲ.
ಹೀಗಾಗಿ ಈ ರಾಜೀ ಸಂಧಾನ ಸಭೆ ಎನ್ನುವುದು ಒಂದು ದೊಟ್ಟ ಡ್ರಾಮಾವಷ್ಟೆ. ನೌಕರರ ಯಾಮಾರಿಸುವ ತಂತ್ರವಾಗಿ ಈ ಸಭೆ ನಡೆಯುವುದು ಬಿಟ್ಟರೆ ಇನ್ನೇನು ಆಗದು. ಅಲ್ಲದೆ ಸರ್ಕಾರ ಮತ್ತು ಸಾರಿಗೆ ನೌಕರರ ನಡುವೆ ನಡೆಯುತ್ತಿರುವ ಹೋರಾಟಕ್ಕೆ ಈ ಕಾರ್ಮಿಕ ಇಲಾಖೆಯ ಅವಶ್ಯಕತೆಯೇ ಇಲ್ಲ. ಆದರೆ ಕೈಗಾರಿಕಾ ಒಪ್ಪಂದದಡಿಯಲ್ಲಿ ಸಾರಿಗೆ ನಿಗಮಗಳು ಬರುತ್ತವೆ ಎಂದು ಅಡಗೂಲಜ್ಜಿ ಕತೆ ಹೇಳಿಕೊಂಡು ಇಲ್ಲದ ಕೈಗಾರಿಕಾ ಒಪ್ಪಂದವನ್ನು ಎಳೆದು ತಂದು ನೌಕರರನ್ನು ಆರ್ಥಿಕವಾಗಿ ಕುಗ್ಗಿಸುತ್ತಿದ್ದಾರೆ.
ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳು ವೇತನ ಹೆಚ್ಚಳ ಸಂಬಂಧ ಹೋರಾಟಕ್ಕಾಗಲಿ ಈ ಒಪ್ಪಂದಕ್ಕಾಗಿ ಬರುವಂತಿಲ್ಲ. ಆದರೆ ವೇತನ ಹೆಚ್ಚಳದ ಲಾಭ ಪಡೆಯುವುದಕ್ಕೆ ಅರ್ಹರಂತೆ. ಇದು ಯಾವ ಸೀಮೆ ಪದ್ಧತಿ. ಇದಕ್ಕೆ ಎಳ್ಳುನೀರು ಬಿಟ್ಟು ನೌಕರರು ಎಂದರೆ ಸಮಸ್ತ ಸಾರಿಗೆ ಅಧಿಕಾರಿಗಳು/ಸಿಬ್ಬಂದಿ ವರ್ಗವಾಗಿರಬೇಕು ಅದನ್ನು ಬಿಟ್ಟು ಯಾವುದೇ ನಿಗಮ ಮಂಡಳಿಗಳಲ್ಲಿ ಇಲ್ಲದ ಕಾನೂನು ಇಲ್ಲಿ ತೋರಿಸಿ 4 ವರ್ಷಕ್ಕೊಮ್ಮೆ ಹೈ ಡ್ರಾಮಾ ಮಾಡಿಸಿ ಒಂದಷ್ಟು ನೌಕರರ ಮನೆಹಾಳು ಮಾಡುವ ಕೆಲಸ ನಡೆದುಕೊಂಡು ಬರುತ್ತಿದೆ . ಇದು ಕೊನೆಯಾಗಬೇಕು ಎಂಬುದೆ ಸಮಸ್ತ ಸಾರಿಗೆ ನೌಕರರ ಆಗ್ರಹವಾಗಿದೆ.