KSRTC: ಪ್ರಯಾಣಿಕರು ಕಳೆದುಕೊಂಡಿದ ಬೆಲೆ ಬಾಳುವ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ತುರುವೇಕೆರೆ ಘಟಕದ ನೌಕರರು
![](https://vijayapatha.in/wp-content/uploads/2025/01/14-Jan-2025-ksrtc-tvk-1.jpg)
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿ, ಅಂದರೆ ಚಾಲಕ ನಿರ್ವಾಹಕರು ಪ್ರಾಮಾಣಿಕತೆ ಮೆರೆಯು ಮೂಲಕ ಇತರರಿಗೆ ಮಾದರಿಯಾಗುತ್ತಿರುವುದು ನಿರಂತರವಾಗಿದೆ. ಇದು ಒಂದು ರೀತಿ ಇವರಿಗೆ ಮಾನವೀಯ ಡ್ಯೂಟಿ ಎಂದರೂ ತಪ್ಪಾಗಲಾರದು.
ಹೌದು ಇದೆ ಜನವರಿ 12ರಂದು ಬೆಂಗಳೂರಿನ ನಂದಿನಿ ಬಡಾವಣೆ ನಿವಾಸಿಯೊಬ್ಬರು ಬಸ್‌ನಲ್ಲಿ ಹುಡುಕಿದರೂ ಸಿಗದೆ ಬಳಿಕ ಕಳುವಾಗಿದೆ ಅಂದುಕೊಂಡು ಹೋಗಿದ್ದ ಮೊಬೈಲ್ ಮತ್ತು ಹಣವಿದ್ದ ಬ್ಯಾಗ್‌ಅನ್ನು ಇಂದು ಅವರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದು ಸಂಸ್ಥೆಗೂ ಗೌರವ ತಂದಿದ್ದಾರೆ ಸಂಸ್ಥೆಯ ಚಾಲನಾ ಸಿಬ್ಬಂದಿಗಳು.
ವಿವರ: KSRTC ತುರುವೇಕೆರೆ ಘಟಕದ ಬಸ್ ಬೆಂಗಳೂರು – ಹೊರನಾಡು ಮಾರ್ಗದಲ್ಲಿ ಇದೇ ಜ.12 ರಂದು ಕಾರ್ಯಾಚಣೆ ಮಾಡುತ್ತಿತ್ತು. ಈ ವೇಳೆ ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿಗಳಾದ ರವೀಂದ್ರ ಕುಮಾರ ಹಾಗೂ ಲಕ್ಷ್ಮೀ ದಂಪತಿ ಕುಟುಂಬ ಸಮೇತ ಈ ಬಸ್‌ನಲ್ಲಿ ಪ್ರಯಾಣಿಸಿದ್ದರು.
ಅಂದು ಅವರು ಹೊರನಾಡು ತಲುಪಿದ ಬಳಿಕ ಬಸ್ ಇಳಿಯಬೇಕಾದರೆ ತಮ್ಮ ವ್ಯಾನಿಟಿ ಬ್ಯಾಗ್ ಕಳುವಾಗಿದೆ ಎಂದು ಭಾವಿಸಿ ಬಸ್‌ನಲ್ಲೇ ಬಿಟ್ಟುಹೋಗಿದ್ದಾರೆ. ಆ ಬ್ಯಾಗ್‌ನಲ್ಲಿ 20,000 ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ ಸುಮಾರು 5000 ರೂಪಾಯಿ ನಗದು ಮತ್ತು ಆಧಾರ್ ಕಾರ್ಡ್ ಸೇರಿ ಇತರ ದಾಖಲೆಗಳು ಇದ್ದವು.
ಅವರು ಬಸ್‌ನಲ್ಲಿ ಬಿಟ್ಟಿರುವುದಾಗಿ ಅನುಮಾನಗೊಂಡು ವಾಹನದ ಒಳಹೋಗಿ ನೋಡಿದ್ದಾರೆ. ಆದರೆ, ಬೆಳಗಿನ ಜಾವ ಮತ್ತು ಗಾಬರಿಯಿಂದ ಹುಡುಕಿದ್ದರಿಂದ ಅವರಿಗೆ ಆ ಬ್ಯಾಗ್ ಸಿಗಲಿಲ್ಲ. ಬಳಿಕ ಎಲ್ಲೋ ಕಳೆದು ಹೋಗಿದೆ ಎಂದು ಭಾವಿಸಿ ಹೊರನಾಡು ದೇವಸ್ಥಾನಕ್ಕೆ ತೆರಳಿದ್ದಾರೆ.
ಬಳಿಕ ಬಸ್ ಚಾಲಕ ಶಿವಲಿಂಗಯ್ಯ ಅವರು ವಾಹನವನ್ನು ಸ್ವಚ್ಛಗೊಳಿಸುವ ( ಕಸಗುಡಿಸುವ) ಸಂದರ್ಭದಲ್ಲಿ ಆ ಬ್ಯಾಗು ಅವರಿಗೆ ಸಿಕ್ಕಿದೆ. ತಕ್ಷಣ ಅವರು ಆ ಬ್ಯಾಗ್ ತೆಗೆದುಕೊಂಡು ದೇವಸ್ಥಾನದ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ. ಆಡಳಿತ ಮಂಡಳಿ ಬ್ಯಾಗ್ ಸಿಕ್ಕಿರುವ ಬಗ್ಗೆ ಧ್ವನಿವರ್ಧಕದ ಮೂಲಕ ತಿಳಿಸಿದ್ದಾರೆ. ಆದರೂ ಸಹ ವಾರಸುದಾರರು ಪತ್ತೆಯಾಗಲಿಲ್ಲ.
ಬ್ಯಾಗಿನಲ್ಲಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದ್ದ ಕಾರಣ ಚಾಲಕ ಶಿವಲಿಂಗಯ್ಯ ಅವರು ಮೊಬೈಲನ್ನು ಚಾರ್ಜ್ ಗೆ ಹಾಕಿದ್ದಾರೆ. ಚಾಲಕರು ಆ ದಿನ ಇಡಿ ರಾತ್ರಿ ನಿದ್ದೆ ಗೆಟ್ಟು ಡ್ಯೂಟಿ ಮಾಡಿದರು ಸಹ ವಾರಸುದಾರರನ್ನು ಹುಡುಕಲೇ ಬೇಕು ಎಂದು ದಿನ ಪೂರ್ತಿ ನಿದ್ದೆಮಾಡದೆ ಪ್ರಯತ್ನಪಟ್ಟಿದ್ದಾರೆ. ಸುಮಾರು ಮಧ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ವಾರಸುದಾರರು ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ.
ಆ ವೇಳೆ ಚಾಲಕರು ನಿಮ್ಮ ಬ್ಯಾಗ್ ಬಸ್‌ನಲ್ಲೇ ಇತ್ತು ಎಂದು ತಿಳಿಸಿದ್ದಾರೆ. ಅಷ್ಟರಲ್ಲೇ ಆ ಪ್ರಯಾಣಿಕರು ಹೂರನಾಡಿನ ಅನ್ನಪೂರ್ಣೇಶ್ವರಿಯ ದರ್ಶನ ಮುಗಿಸಿಕೊಂಡು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದು, ನಾವು ಬೆಂಗಳೂರಿಗೆ ಬಂದ ಮೇಲೆ ನಿಮ್ಮಿಂದ ಬ್ಯಾಗ್ ಪಡೆಯುತ್ತೇವೆ ಅಲ್ಲಿಯವರೆಗೂ ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ಚಾಲಕ ಶಿವಲಿಂಗಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಸರಿ ನಾವು ನಿಮ್ಮ ಬ್ಯಾಗನ್ನು ಜೋಪಾನವಾಗಿ ಇಟ್ಟುಕೊಂಡಿರುತ್ತೇವೆ ನೀವು ಯಾವುದೆ ಗೊಂದಲ ಗಾಬರಿಗೆ ಒಳಗಾಗದೆ ದೇವರ ದರ್ಶನ ಮಾಡಿಕೊಂಡು ಬನ್ನಿ ಎಂದು ಹೇಳಿ ಶಿವಲಿಂಗಯ್ಯ ತಮ್ಮ ಬಳಿಯೆ ಬ್ಯಾಗ ಇಟ್ಟುಕೊಂಡಿದ್ದರು.
ಇನ್ನು ಬ್ಯಾಗ್ ಕಳೆದುಕೊಂಡಿದ್ದ ರವೀಂದ್ರ ಕುಮಾರ್ ಹಾಗೂ ಲಕ್ಷ್ಮೀ ದಂಪತಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಂದು ಅಂದರೆ ಜ.14ರ ಬೆಳಗಿನ ಜಾವ ಚಾಲಕ ಶಿವಲಿಂಗಯ್ಯ ಅವರಿಂದ ತಮ್ಮ ಬ್ಯಾಗ್ ಪಡೆದುಕೊಂಡರು. ಇದರಿಂದ ಕಳೆದೇ ಹೋಗಿದೆ ಎಂದುಕೊಂಡಿದ್ದ ಬ್ಯಾಗ್ ಮತ್ತು ಅದರಲ್ಲಿದ್ದ ಎಲ್ಲ ವಸ್ತುಗಳು ಸಿಕ್ಕಿರುವುದು ತುಂಬ ಖುಷಿಯಾಯಿತು.
ತಮಗೆ ಸಿಕ್ಕ ಬ್ಯಾಗನ್ನು ಮರಳಿಸಿರುವ ತುರುವೇಕೆರೆ ಘಟಕದ ಚಾಲಕ ಹಾಗೂ ನಿರ್ವಾಹಕರು ಹಾಗೂ ಇಂಥ ಚಾಲನಾ ಸಿಬ್ಬಂದಿಗಳನ್ನು ಹೊಂದಿರುವ ಕೆಎಸ್ಆರ್ಟಿಸಿ ಸಂಸ್ಥೆಗೆ ಮನಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ರವೀಂದ್ರ ಕುಮಾರ್ ಹಾಗೂ ಲಕ್ಷ್ಮೀ ದಂಪತಿ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಚಾಲನಾ ಸಿಬ್ಬಂದಿಗಳ ಈ ಕಾರ್ಯಕ್ಕೆ ಸಂಸ್ಥೆಯ ಎಂಡಿ ಅನ್ಬುಕುಮಾರ್ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಜತೆಗೆ ಘಟಕ ವ್ಯಸ್ಥಾಪಕರು ಶ್ಲಾಘನೆ ವ್ಯಕ್ತಪಡಿಸಿದ್ದು, ಸಂಸ್ಥೆಗೆ ಗೌರವ ತಂದುಕೊಟ್ಟ ನೌಕರರನ್ನು ಅಭಿನಂದಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)