ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಇಂದು ಆದೇಶ ಹೊರಡಿಸಿದ್ದಾರೆ.
ಒಂಟಿ ಪೋಷಕರಾಗಿರುವ ನಿಗಮದ ಪುರುಷ ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವ ಸಂಬಂಧ ಜ.2-2025ರ ಗುರುವಾರ ಆದೇಶ ಹೊರಡಿಸುವ ಮೂಲಕ ಎಂಡಿ ಅನ್ಬುಕುಮಾರ್ ಅವರು ಸಂಸ್ಥೆಯಲ್ಲಿ ಕರ್ತವ್ಯ ನಿರತ ಒಂಟಿ ಪೋಷಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ರಾಜ್ಯ ಸರ್ಕಾರವು ಒಂಟಿ ಪೋಷಕರಾಗಿರುವ (Single male parent) ಅವಿವಾಹಿತ/ ವಿವಾಹ- ವಿಚ್ಛೇದಿತ / ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೆ ಮಕ್ಕಳ ಆರೈಕೆಗಾಗಿ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ 180 ದಿನಗಳಿಗೆ ಮೀರದಂತೆ ಸರ್ಕಾರದ ಆದೇಶ ಸಂಖ್ಯೆ: ಆಇ 4(ಇ) ಸೇನಿಸೇ 2021 ದಿನಾಂಕ 21.06.2021 ವಿಧಿಸಲಾದ ಷರತ್ತುಇಗಳನ್ನು ಸಂದರ್ಭಾನುಸಾರ ಅನ್ವಯಿಸಿಕೊಂಡು ಶಿಶುಪಾಲನಾ ರಜೆ ಮಂಜೂರು ಮಾಡುವ ಸೌಲಭ್ಯವನ್ನು ಸರ್ಕಾರದ ಆದೇಶ ಸಂಖ್ಯೆ: ಆಇ 3 (ಇ) ಸೇನಿಸೇ 2023, ದಿನಾಂಕ:09.06.2023 ರನ್ವಯ ಜಾರಿಗೆ ಬರುವಂತೆ ವಿಸ್ತರಿಸಿದೆ.
ಅದರಂತೆ. KSRTC ನಿಗಮದಲ್ಲಿ ಒಂಟಿ ಪೋಷಕರಾಗಿರುವ (Single male parent) ಅವಿವಾಹಿತ/ ವಿವಾಹ-ವಿಚ್ಛೇದಿತ /ವಿಧುರ ಪುರುಷ ನೌಕರರಿಗೆ ಮಕ್ಕಳ ಆರೈಕೆಗಾಗಿ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ 180 ದಿನಗಳಿಗೆ ಮೀರದಂತೆ ಸುತ್ತೋಲೆ ಸಂಖ್ಯೆ: 1696. ದಿನಾಂಕ:18.01.2022 ರ ಷರತ್ತು ಮತ್ತು ನಿಬಂಧನೆಗಳನ್ವಯ ಶಿಶುಪಾಲನಾ ರಜೆ ಮಂಜೂರು ಮಾಡಲು ನಿಗಮದ ನಿರ್ದೇಶಕ ಮಂಡಳಿ ಠರಾವು ಸಂಖ್ಯೆ: 10453, ದಿನಾಂಕ:13.11.2024 ರನ್ವಯ ಒಪ್ಪಿಗೆ ನೀಡಿದೆ.
ಹೀಗಾಗಿ ಯಾವುದೇ ಸಂದರ್ಭದಲ್ಲಿ ಶಿಶುಪಾಲನಾ ರಜೆಯನ್ನು ಪಡೆದ ಅವಧಿಯಲ್ಲಿ ಸಂಬಂಧಿತ ಪುರುಷ ನೌಕರರು ವಿವಾಹ ಮಾಡಿಕೊಂಡಲ್ಲಿ ಆ ದಿನಾಂಕದಿಂದ ಶಿಶುಪಾಲನಾ ರಜೆಯು ತಾನಾಗಿಯೇ ರದ್ದುಗೊಳ್ಳುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನು ಸಾರಿಗೆ ನಿಗಮದ ಸಂಬಂಧಪಟ್ಟವರೆಲ್ಲರೂ ಈ ಆದೇಶವನ್ನು ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳತಕ್ಕದ್ದು, ಜತೆಗೆ ಈ ಸುತ್ತೋಲೆಯು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.